ದಲಿತರ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನ ಕಾರಣ: ರಾಹುಲ್ ಗಾಂಧಿ

ಹೊಸದಿಲ್ಲಿ,ಜ.2: ಭೀಮಾ-ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕಾಗಿ ಕೇಂದ್ರವನ್ನು ತರಾಟೆಗೆತ್ತಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ದಲಿತ ಸಮುದಾಯದ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳಿಗೆ ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನವು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸೋಮವಾರ ಸಂಭವಿಸಿದ ಅಂತರ್ಜಾತೀಯ ಘರ್ಷಣೆಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮೋದಿ ಸರಕಾರದ ದಲಿತ ವಿರೋಧಿ ನೀತಿಯ ವಿರುದ್ಧ ದಲಿತ ಪ್ರತಿರೋಧದ ಪ್ರಬಲ ಸಂಕೇತವಾಗಿದೆ ಎಂದು ಪ್ರಶಂಸಿಸಿ ರಾಹುಲ್ ಟ್ವೀಟಿಸಿದ್ದಾರೆ. ದಲಿತರು ಭಾರತೀಯ ಸಮಾಜದಲ್ಲಿ ಕೆಳಸ್ತರದಲ್ಲಿಯೇ ಉಳಿಯಬೇಕು ಎನ್ನುವುದು ಆರೆಸ್ಸೆಸ್-ಬಿಜೆಪಿಯ ಫ್ಯಾಸಿಸ್ಟ್ ದೃಷ್ಟಿಕೋನದ ಮುಖ್ಯ ಆಧಾರಸ್ತಂಭವಾಗಿದೆ. ಉನಾ,ರೋಹಿತ್ ವೇಮುಲಾ ಮತ್ತು ಈಗ ಭೀಮಾ-ಕೋರೆಗಾಂವ್ ಇವೆಲ್ಲ ದಲಿತ ಪ್ರತಿರೋಧದ ಪ್ರಬಲ ಸಂಕೇತಗಳಾಗಿವೆ ಎಂದು ಅವರು ಹೇಳಿದ್ದಾರೆ.
ಪವಾರ್ ಟೀಕೆ
ಮಂಗಳವಾರ ಪುಣೆ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾಚಾರವನ್ನು ತಡೆಯಲು ಆಡಳಿತವು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗದುಕೊಂಡಿರಲಿಲ್ಲ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು ಆರೋಪಿಸಿದ್ದಾರೆ.





