ದಲಿತರ ಮೇಲೆ ಹಲ್ಲೆಗೆ ಬಿಜೆಪಿ ಸರಕಾರವೇ ಹೊಣೆ: ಅಬ್ದುಲ್ ಹನ್ನಾನ್ ಆರೋಪ
ಬೆಂಗಳೂರು, ಜ.2: ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾಂವ್‌ನ 200ನೇ ವರ್ಷಾಚರಣೆ ವಿಜಯೋತ್ಸವದ ವೇಳೆ ದಲಿತರ ಮೇಲೆ ಬಲಪಂಥೀಯರು ನಡೆಸಿದ ದಾಳಿಗೆ ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರಕಾರವೇ ನೇರ ಹೊಣೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಆರೋಪಿಸಿದ್ದಾರೆ.
ಕೋರೆಗಾಂವ್ ವಿಜಯ ಉತ್ಸವ ಸಮಾವೇಶಕ್ಕೆ ತೆರಳಿದ ಬಹುಜನರ ಮೇಲೆ ಕಿಡಿಗೇಡಿಗಳಿಂದ ದಾಳಿ ಆಗಿರುವುದು ಒಂದು ಪೂರ್ವಯೋಜಿತ ಕೃತ್ಯವಾಗಿದ್ದು, ದಾಳಿಕೋರರು ಡಾ.ಬಿ.ಆರ್.ಅಂಬೇಡ್ಕರ್ ವಿರೋಧಿಗಳಾಗಿದ್ದಾರೆ. ಈ ದಾಳಿಗೆ ಮಹಾರಾಷ್ಟ್ರ ಸರಕಾರವೇ ಸಂಪೂರ್ಣ ಜವಾಬ್ದಾರಿ ಹೊರಬೇಕಾಗಿದೆ ಎಂದು ಅಬ್ದುಲ್ ಹನ್ನಾನ್ ತಿಳಿಸಿದ್ದಾರೆ.
ಮಾನವ ವಿರೋಧಿ ಶ್ರೇಣಿಕೃತ ವ್ಯವಸ್ಥೆಯನ್ನು ಜಾರಿಗೊಳಿಸುವ ಬಲಪಂಥೀಯರ ದುರುದ್ದೇಶ ಯೋಜನೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಬಹುದೊಡ್ಡ ಅಡ್ಡಗೋಡೆಯಾಗಿದೆ. ಆದುದರಿಂದ ಹೋರಾಟಗಾರರು ಅಂಬೇಡ್ಕರ್ ಚಿಂತನೆಗಳನ್ನು ಪ್ರಸ್ತುತ ಹೋರಾಟದ ಜೀವನದಲ್ಲಿ ಅಳವಡಿಸಿಕೊಂಡು ಮನುವಾದಿಗಳ ಸಿದ್ಧಾಂತವನ್ನು ಈ ಸಮಾಜದಿಂದ ಕಿತ್ತು ಎಸೆಯಬೇಕೆಂದು ಅವರು ಹೇಳಿದ್ದಾರೆ.
ದೇಶದಲ್ಲಿ ಅಸ್ಪೃಶ್ಯತೆಯ ನಿವಾರಣೆಗಾಗಿ ‘ಮಹರ್’ ದಲಿತರ ಹೋರಾಟಕ್ಕೆ ಸ್ಪೂರ್ತಿ ಎಂಬ ಪರಿಕಲ್ಪನೆಯೊಂದಿಗೆ 1927 ಜನವರಿ ಒಂದರಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೋರೆಗಾಂವ್‌ನಲ್ಲಿ ಬೃಹತ್ ಸಮ್ಮೇಳನ ಆಯೋಜಿಸಿ ಮಹರ್ ಯೋಧರ ಹೋರಾಟವನ್ನು ಜನರಿಗೆ ತಿಳಿಯುವಂತೆ ಮಾಡಿದರು.
ಇದರ ಮುಂದುವರಿದ ಭಾಗವಾಗಿ ಇಂದಿಗೂ ಸಹ ಬಹುಜನರು ಅಂಬೇಡ್ಕರ್ ಯೋಜನೆಯಂತೆ ಕೋರೆಗಾಂವ್ ಉತ್ಸವ ಆಚರಿಸಿಕೊಂಡು ಬಂದಿರುತ್ತಾರೆ. 1818 ರಲ್ಲಿ ನಡೆದ ಕೋರೆಗಾಂವ್ ಯುದ್ಧಕ್ಕೆ ಇದೀಗ 200 ವರ್ಷಗಳಾಗಿವೆ. ಈ ಬಾರಿ ಕೋರೆಗಾಂವ್ ವಿಜಯ ಉತ್ಸವ ಬಹಳ ವಿಶೇಷ ಎಂದು ಪರಿಗಣಿಸಿದ ಸುಮಾರು 200ಕ್ಕೂ ಹೆಚ್ಚು ದಲಿತ-ಪ್ರಗತಿಪರ ಸಂಘಟನೆಗಳು ಸೇರಿ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು.
ಈ ಸಮಾವೇಶಕ್ಕೆ ಬಲಪಂಥೀಯ ಸಂಘಟನೆಗಳು ಪ್ರಾರಂಭದಲ್ಲೇ ವಿರೋಧ ವ್ಯಕ್ತಪಡಿಸಿದಲ್ಲದೇ, ಈ ಸಮಾವೇಶ ಜಾತಿಗಳ ಮಧ್ಯೆ ಬಿರುಕು ಮೂಡಿಸುತ್ತದೆ ಎಂದು ಆಪಾದಿಸಿರುವುದು ಬಲಪಂಥೀಯರ ಮನುವಾದಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







