ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಹೆಸರಿನಲ್ಲಿ ಪ್ರತಿಷ್ಠಾನ ರಚನೆ
ಬೆಂಗಳೂರು, ಜ.2: ತಮ್ಮ ಸಾಹಿತ್ಯದ ಮೂಲಕ ಪರಿಸರದ ಜೀವ ವೈವಿದ್ಯಗಳ ಕುರಿತು ಓದುಗರರಿಗೆ ಕುತೂಹಲ ಮೂಡಿಸಿದ್ದ ಹಿರಿಯ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೆಸರಿನಲ್ಲಿ ಪ್ರತಿಷ್ಠಾನ ರಚನೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ನೂತನ ಅಧ್ಯಕ್ಷರಾಗಿದ್ದು, ಹಿರಿಯ ಲೇಖಕ ನಾಗೇಶ್ ಹೆಗಡೆ, ಲೇಖಕಿ ರಾಜೇಶ್ವರಿ ತೇಜಸ್ವಿ, ಪರಿಷತ್ ಸದಸ್ಯೆ ಮೋಟಮ್ಮ, ಪರಿಸರ ಚಿಂತಕ ಡಾ.ಪ್ರದೀಪ್ ಕೆಂಜಿಗೆ, ಬರಹಗಾರ ಬಿ. ಈಶ್ವರಪ್ರಸಾದ್, ವಿಜ್ಞಾನಿ ಡಾ.ಎಂ.ಸಂಜಪ್ಪ, ಬರಹಗಾರರು, ರಾಘವೇಂದ್ರ ಸರಕಾರೇತರ ಸದಸ್ಯರಾಗಿದ್ದಾರೆ.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕರು, ಚಿಕ್ಕಮಗಳೂರಿನ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕುವೆಂಪು ವಿವಿ ಕುಲಪತಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್, ಸ್ಥಳೀಯ ಶಾಸಕ, ಸಂಸತ್ ಸದಸ್ಯರು, ಲೋಕಸಭಾ ಸದಸ್ಯರು ಪದನಿಮಿತ್ತ ಸದಸ್ಯರಾಗಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





