ರಸ್ತೆಗಿಳಿಯಲಿರುವ ಪರಿಸರ ಸ್ನೇಹಿ ಇಲೆಕ್ಟ್ರಿಕ್ ಬಸ್ಸುಗಳು: ಎಚ್.ಎಂ.ರೇವಣ್ಣ
ಬೆಂಗಳೂರು, ಜ.2: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಲಭ್ಯವಿರುವ ಪರಿಸರ ಸ್ನೇಹಿ ಅತ್ಯಾಧುನಿಕ ವಿದ್ಯುತ್ ಚಾಲಿತ (ಇಲೆಕ್ಟ್ರಿಕ್) ಬಸ್ಸುಗಳು ಇನ್ನೆರೆಡು ತಿಂಗಳಲ್ಲಿ ನಮ್ಮ ರಾಜ್ಯದ ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾರ್ವಜನಿಕರ ಉಪಯೋಗಕ್ಕಾಗಿ ಇಲೆಕ್ಟ್ರಿಕ್ ಬಸ್ಸುಗಳ ಸಂಚಾರ ಆರಂಭಿಸುತ್ತಿರುವ ದೇಶದ ಮೊದಲ ರಾಜ್ಯ ನಮ್ಮದು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.
ಪ್ರತಿಯೊಂದು ಇಲೆಕ್ಟ್ರಿಕ್ ಬಸ್‌ಗೆ ಮೂರು ಕೋಟಿ ರೂ.ವೆಚ್ಚ ತಗಲುತ್ತಿದ್ದು, ಮೊದಲ ಹಂತದಲ್ಲಿ 150 ಬಸ್ಸುಗಳನ್ನು ಸಾರ್ವಜನಿಕ ಸೇವೆಗೆ ಬಳಸಲಾಗುವುದು. ಬೆಂಗಳೂರು ನಗರದ ಕೆಲವು ಆಯ್ದ ಮಾರ್ಗಗಳು ಹಾಗೂ ಕೆಎಸ್ಸಾರ್ಟಿಸಿ ಅಡಿಯಲ್ಲಿ ಬೆಂಗಳೂರು-ಮೈಸೂರು, ಬೆಂಗಳೂರು- ತುಮಕೂರು- ಕೋಲಾರ ನಗರಗಳ ನಡುವೆ ಈ ಬಸ್ಸುಗಳು ಸಂಚರಿಸಲಿೆ ಎಂದು ರೇವಣ್ಣ ಮಾಹಿತಿ ನೀಡಿದರು.
ಬೆಂಗಳೂರಿನಲ್ಲಿ ಈ ಬಸ್ಸುಗಳು ಕಾರ್ಯಾರಂಭ ಮಾಡಿದ ಬಳಿಕ ಮುಂದಿನ ದಿನಗಳಲ್ಲಿ ರಾಜ್ಯದ ಇತರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಇಲೆಕ್ಟ್ರಿಕ್ ಬಸ್ಸುಗಳ ಸಂಚಾರ ಆರಂಭಿಸಲಾಗುವುದು. ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ.ಮಾತ್ರ ಈ ಬಸ್ಸುಗಳು ಸಂಚರಿಸಲಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರದಿಂದ ಸಮೀಪದ ನಗರ ಪಟ್ಟಣಗಳಿಗೆ ಮಾತ್ರ ಇದರ ಸೌಲಭ್ಯಗಳನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪರಿಸರ ಸಂರಕ್ಷಣೆಯ ಉದ್ದೇಶದಿಂದ ಕೇಂದ್ರ ಸರಕಾರವು ನೀಡುವಂತಹ ಸಬ್ಸಿಡಿ ಹಣವನ್ನು ಸದುಪಯೋಗಪಡಿಸಿಕೊಂಡು ಖಾಸಗಿ ಸಹಭಾಗಿತ್ವದಲ್ಲಿ ಜನಸಾಮಾನ್ಯ ರಿಗೆ ಈ ಸಾರಿಗೆ ಸೇವೆಯನ್ನು ಒದಗಿಸಲಾಗುವುದು. 150 ಬಸ್ಸುಗಳನ್ನು ಪಡೆಯುವ ಸಂಬಂಧ ಈಗಾಗಲೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ಪರಿಸರ ಸ್ನೇಹಿ ಬಸ್ಸುಗಳು ಸಂಚಾರ ಆರಂಭಿಸಲಿವೆ ಎಂದು ರೇವಣ್ಣ ತಿಳಿಸಿದರು.
ಬೆಂಗಳೂರು, ಮೈಸೂರು, ಬಳ್ಳಾರಿ, ಹೊಸಪೇಟೆ ಹಾಗೂ ನೆಲಮಂಗಲದಲ್ಲಿರುವ ಟ್ರಕ್ ಟರ್ಮಿನಲ್ ಗಳನ್ನು 70 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಹೊಸಪೇಟೆ ಬಳಿಯಿರುವ ಟ್ರಕ್ ಟರ್ಮಿನಲ್ ಸುಮಾರು 37 ಎಕರೆ ವಿಶಾಲವಾಗಿದ್ದು, 500ಕ್ಕೂ ಹೆಚ್ಚು ಟ್ರಕ್‌ಗಳನ್ನು ಅಲ್ಲಿ ನಿಲ್ಲಿಸಬಹುದಾಗಿದೆ ಎಂದು ರೇವಣ್ಣ ಹೇಳಿದರು.
ಹಲವು ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನೇಮಕಾತಿ ಪ್ರಕ್ರಿಯೆಗೆ ಇಲಾಖೆಯಲ್ಲಿರುವ ಅಸಮಾಧಾನವನ್ನು ಹೋಗಲಾಡಿಸಿ, ಖಾಲಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕನಕದಾಸ ಪ್ರತಿಮೆ ಸ್ಥಾಪನೆ:
ಶಕ್ತಿ ಕೇಂದ್ರ ವಿಧಾನಸೌಧ ಹಾಗೂ ಶಾಸಕರ ಭವನದ ನಡುವೆ 20 ಅಡಿ ಎತ್ತರದ ‘ದಾಸಶ್ರೇಷ್ಠ’ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪಿಸಲು ರಾಜ್ಯ ಸರಕಾರ ತೀರ್ಮಾನ ಕೈಗೊಂಡಿದ್ದು, ಎರಡು ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 45 ದಿನಗಳೊಳಗೆ ಪ್ರತಿಮೆ ಸ್ಥಾಪನೆಯಾಗಲಿದೆ.
-ಎಚ್.ಎಂ.ರೇವಣ್ಣ ಸಾರಿಗೆ ಸಚಿವ







