ರಾಜ್ಯದಲ್ಲಿ ‘ಆಧಾರ್ ಕಾಯ್ದೆ’ ಜಾರಿಗೆ ಸಚಿವ ಸಂಪುಟ ತೀರ್ಮಾನ

ಬೆಂಗಳೂರು, ಜ.2: ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಆಧಾರ್(ಆರ್ಥಿಕ ಮತ್ತು ಇತರೆ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನೆಗಳು ಮತ್ತು ಸೇವೆಗಳು) ವಿಧೇಯಕ-2017ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ತಿಳಿಸಿದರು.
ಸರಕಾರದ ಯಾವುದೆ ಯೋಜನೆಗಳ ಫಲ, ವಿನಾಯಿತಿ, ರಿಯಾಯಿತಿ, ಸಬ್ಸಿಡಿಗಳು, ಅನುದಾನಗಳು, ಸಾಮಾಜಿಕ ಪಿಂಚಣಿ, ವೇತನ ಮೊದಲಾದ ಸೌಲಭ್ಯಗಳನ್ನು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯವಾಗಲಿದೆ. ಆಧಾರ್ ಕಾಯ್ದೆ ಜಾರಿಗೆ ಬಂದ ನಂತರ ಎಲ್ಲ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಿಸಬೇಕು ಎಂದು ಜಯಚಂದ್ರ ಹೇಳಿದರು.
ಸರಕಾರಿ ಯೋಜನೆಗಳ ಫಲ ಪಡೆಯುವ ಸಂದರ್ಭದಲ್ಲೂ ಫಲಾನುಭವಿಗಳು ಆಧಾರ್ ಸಂಖ್ಯೆ ನೀಡಬೇಕಾಗುತ್ತದೆ. ಇದರಿಂದ ಪಾರದರ್ಶಕ ಹಾಗೂ ಉತ್ತಮ ಆಡಳಿತ ನೀಡಲು ಸಹಾಯವಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಂಡಿ-ಅಳ್ವೆಕೋಡಿ ಮೀನುಗಾರಿಕೆ ಇಳಿದಾಣ ಕೇಂದ್ರದ ಬಳಿ ಅಲೆ ತಡೆಗೋಡೆ(ಬ್ರೇಕ್‌ವಾಟರ್) ನಿರ್ಮಾಣ ಕಾಮಗಾರಿಯನ್ನು 86.08 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
2018-19ನೆ ಸಾಲಿನಲ್ಲಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 185 ಕೋಟಿ ರೂ.ಅಂದಾಜು ಮೊತ್ತದಲ್ಲಿ ಉಚಿತವಾಗಿ ಬೈಸಿಕಲ್‌ಗಳನ್ನು ವಿತರಿಸಲು ಆಡಳಿತಾತ್ಮಕ ಅನುಮೊದನೆ ನೀಡಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿ ಹೋಬಳಿಯ ನ್ಯಾಮತಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ ಸೇರಿದ ಚಿನ್ನಿಕಟ್ಟೆ ಗ್ರಾಮದ ಸ.ನಂ.219 ಮತ್ತು 220ರಲ್ಲಿನ 15.23 ಎಕರೆ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಿನ ಹೊಸ ಸರಕಾರಿ ಎಚ್‌ಎಸ್‌ಐಎಸ್ ಘೋಷಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಹೆಚ್ಚುವರಿ ವ್ಯತ್ಯಾಸದ ಒಟ್ಟು 16.64 ಕೋಟಿ ರೂ.ಗಳನ್ನು ರಾಜ್ಯ ವಲಯದ ಲೆಕ್ಕ ಶೀರ್ಷಿಕೆಯಿಂದ ಭರಿಸಲು ನಿರ್ಧರಿಸಲಾಗಿದೆ.
ಗ್ರಾ.ಪಂ.ಗಳಿಗೆ ವೈ-ಫೈ ಸೇವೆ: ರಾಜ್ಯದ 500 ಗ್ರಾಮ ಪಂಚಾಯತ್ ಗಳಲ್ಲಿ ಕಿಯೋನಿಕ್ಸ್ ಮೂಲಕ ವಿಜಿಎಫ್ ಮಾದರಿಯಲ್ಲಿ ಮತ್ತು 2 ಸಾವಿರ ಗ್ರಾಮ ಪಂಚಾಯತ್ ಗಳಲ್ಲಿ ಇ-ಗವರ್ನನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್‌ರವರ ಮೂಲಕ ಓಟಿಎ ಮಾದರಿಯಲ್ಲಿ ವೈ-ಫೈ ಸೇವೆಗಳ ನಿಯೋಜನೆಗೆ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 10 ಸಾವಿರ ಫಲಾನುಭವಿಗಳಿಗೆ 40 ಕೋಟಿ ರೂ.ಗಳ ವೆಚ್ಚದಲ್ಲಿ ‘ಆಶಾದೀಪ’ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ 89 ಜನವಸತಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಅಂದಾಜು ಮೊತ್ತ 54.73 ಕೋಟಿ ರೂ.ಗಳಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. 2017-18ನೆ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಮತ್ತು ವಸತಿ ಶಾಲೆಗಳ 57,104 ವಿದ್ಯಾರ್ಥಿಗಳಿಗೆ ಹಾಸಿಗೆ ಹೊದಿಕೆಗಳನ್ನು 7.32 ಕೋಟಿ ರೂ.ಅಂದಾಜು ಮೊತ್ತದಲ್ಲಿ ಟೆಂಡರ್ ಕರೆದು ಸರಬರಾಜು ಮಾಡಲು ಹಾಗೂ ಶುಚಿ ಸಂಭ್ರಮ ಕಿಟ್‌ಗಳನ್ನು 12 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿಮಿಟೆಡ್ ಇವರಿಂದ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ನುಡಿದರು.
ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿಯ 20.60 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. 2016-17ನೆ ಸಾಲಿನಲ್ಲಿ ಸರಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ 17,351 ಪರಿಶಿಷ್ಟ ಜಾತಿ ಮತ್ತು 7048 ಪರಿಶಿಷ್ಟ ಪಂಗಡದ ತರಬೇತಿದಾರರಿಗೆ ಶೂ ಮತ್ತು ಸಾಕ್ಸ್‌ಗಳನ್ನು 7.43 ಕೋಟಿ ರೂ.ಅಂದಾಜು ಮೊತ್ತದಲ್ಲಿ ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಖರೀದಿಸಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಕಲ್ಮಶಗಳ ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಯ ರಾಜ್ಯ ನೀತಿಗೆ ಅನುಮೋದನೆ ನೀಡಿದೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಹಾಗೂ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳಿ(ಜನತಾ ಬಝಾರ್) ಮೂಲಕ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ರಾಜ್ಯ ಕೃಷಿ ಬೆಲೆ ಆಯೋಗವನ್ನು ಎರಡನೆ ಅವಧಿಗೆ (2017-2022) ಮುಂದುವರೆಸಲು ಆದೇಶ ಹೊರಡಿಸಿರುವ ಕ್ರಮಕ್ಕೆ ಸಚಿವ ಸಂಪುಟ ಸಭೆ ಘಟನೋತ್ತರ ಅನುಮೋದನೆ ನೀಡಿದೆ ಎಂದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ವಿಧೇಯಕ 2016ಕ್ಕೆ ಅನುಮೋದನೆ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಕಟ್ಟಡ ಕಾಮಗಾರಿಗಳನ್ನು 45.69 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅಲ್ಲದೆ, ರಾಜ್ಯ ಹೈಕೋರ್ಟ್‌ನ ಸಿಬ್ಬಂದಿಗಳಿಗೆ ಕೇಂದ್ರ ಸರಕಾರದ ವೇತನ ಶ್ರೇಣಿಗಳನ್ನು ಮಂಜೂರು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗೌತಮಪುರ ಮತ್ತು ಇತರೆ 127 ಜನವಸತಿಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ 66.10 ಕೋಟಿ ರೂ.ಗಳ ಅಂದಾಜು ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮತ್ತು ಇತರೆ 7 ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ವಿತರಣಾ ವ್ಯವಸ್ಥೆ ಹಾಗೂ ಎಕ್ಸ್‌ಪ್ರೆಸ್ ಫೀಡರ್‌ಲೈನ್‌ನ ಹೆಚ್ಚುವರಿ ಕಾಮಗಾರಿಯ 24.50 ಕೋಟಿ ರೂ.ಪರಿಷ್ಕೃತ ಅಂದಾಜಿಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಹಳಿಯಾಳ ತಾಲೂಕಿನ ತೇರಗಾಂವ, ಕಾವಲವಾಡ ಮತ್ತು 91 ಗ್ರಾಮಗಳಿಗೆ 102.52 ಕೋಟಿ ರೂ.ಗಳ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಡಿಬಿಓಟಿ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಬಹುಗ್ರಾಮ ಯೋಜನೆಯಡಿ ಪಾವಗಡ ತಾಲೂಕಿನ ಪಾವಗಡ ಪಟ್ಟಣ ಮತ್ತು ಜನವಸತಿಗಳು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಪಟ್ಟಣ ಮತ್ತು ಜನವಸತಿಗಳು, ಚಳ್ಳಕೆರೆ ತಾಲೂಕಿನ ಜನವಸತಿಗಳು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಮತ್ತು 216 ಜನವಸತಿಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ತುರುವನೂರು ಹೋಬಳಿಯ 59 ಜನವಸತಿಗಳಿಗೆ ಕುಡಿಯುವ ನೀರು ಸರಬರಾಜು ಯೋಜನೆಯನ್ನು 2352.60 ಕೋಟಿ ರೂ.ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಮೈಸೂರಿನ 245 ವೀಳ್ಯದೆಲೆ ಬೆಳೆಗಾರರಿಗೆ ಮೈಸೂರು ಮಹಾನಗರ ಪಾಲಿಕೆಯ ಒಡೆತನದ ಮುನಿಸಿಪಲ್ ಸಿವೇಜ್ ಫಾರಂನಲ್ಲಿ ವೀಳ್ಯದೆಲೆ ಬೆಳೆಯುವ ಸಲುವಾಗಿ ತಲಾ 5 ಗುಂಟೆ ಜಮೀನಿನಂತೆ ಒಟ್ಟು 30 ಎಕರೆ 25 ಗುಂಟೆ ಜಮೀನನ್ನು ಹಂಚಿಕೆ ಮಾಡಲು ಸಚಿವ ಸಂಪುಟ ಭೆ ತೀರ್ಮಾನಿಸಿದೆ ಎಂದು ಹೇಳಿದರು.
ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ಜನ ನಿವೃತ್ತ ನ್ಯಾಯಾಧೀಶರ ಅವಧಿಯನ್ನು ಮತ್ತೊಂದು ವರ್ಷ ಮುಂದುವರೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಆರ್ಥಿಕ ಸಾಮಗ್ರಿ ನೀಡಲು 319 ಕೋಟಿ 46 ಲಕ್ಷ ರೂ.ಮೀಸಲಿಡಲಾಗಿದ್ದು, ಇದರ ಅಂತಿಮ ತೀರ್ಮಾನ ಕೈಗೊಳ್ಳಲು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಸೀರಾ ತಾಲೂಕಿನಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 140 ಜಮೀನನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು.
ಫೆ.5ಕ್ಕೆ ರಾಜ್ಯಪಾಲರ ಭಾಷಣ, 16ಕ್ಕೆ ಬಜೆಟ್ ಮಂಡನೆ
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಫೆ.5ರಂದು ಭಾಷಣ ಮಾಡಲಿದ್ದಾರೆ. ಈ ಅಧಿವೇಶನವು ಫೆ.5ರಿಂದ 9ರವರೆಗೆ ನಡೆಯಲಿದೆ. ಫೆ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಜೆಟ್ ಮಂಡನೆ ಮಾಡಲಿದ್ದಾರೆ.
-ಟಿ.ಬಿ.ಜಯಚಂದ್ರ, ಕಾನೂನು ಸಚಿವ







