ಬೆಂಗಳೂರು:ಎನ್‌ಎಂಸಿ ರಚನೆ ವಿರೋಧಿಸಿ ಪ್ರತಿಭಟನೆ
ಬೆಂಗಳೂರು, ಜ.2: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರಚನೆ ವಿರೋಧಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆಯ (ಎಐಡಿಎಸ್‌ಒ) ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಬಿ.ರವಿನಂದನ್, ರಾಷ್ಟ್ರೀಯ ವೈದ್ಯಕೀಯ ಮಂಡಳಿ ಕೈಬಿಟ್ಟು, ಎನ್‌ಎಂಸಿ ರಚನೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಇದು ಅವೈಜ್ಞಾನಿಕ ನಿರ್ಧಾರ ಎಂದು ಆರೋಪಿಸಿದರು
ಎನ್‌ಎಂಸಿಯಲ್ಲಿ 20 ಸದಸ್ಯರು ಇರಲಿದ್ದು, ಇವರನ್ನು ಕೇಂದ್ರ ಸರಕಾರವೇ ನೇಮಕ ಮಾಡುತ್ತದೆ. ರಾಜಕಾರಣಿಗಳು ಹಾಗೂ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರನ್ನೆ ಸದಸ್ಯರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಇದರಿಂದ ಸೀಟುಗಳ ಹಂಚಿಕೆ ವೇಳೆ ಅವರು ಹಸ್ತಕ್ಷೇಪ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಶೇಕಡ 60 ರಷ್ಟು ಮ್ಯಾನೇಜ್‌ಮೆಂಟ್ ಸೀಟುಗಳನ್ನು ಖಾಸಗಿ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳು ಹಾಗೂ ಶೇ.40ರಷ್ಟು ಸೀಟುಗಳನ್ನು ಸರಕಾರ ಹಂಚಿಕೆ ಮಾಡಬಹುದು ಎಂದು ಎನ್‌ಎಂಸಿ ಹೇಳಿದೆ.
ಇದು ಅವೈಜ್ಞಾನಿಕ. ಶೇ.60 ರಷ್ಟು ಸೀಟುಗಳನ್ನು ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಬಿಟ್ಟುಕೊಡುವುದರಿಂದ ಸೀಟುಗಳನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವ ಸಾಧ್ಯತೆ ಇದೆ. ಇದು ವಿದ್ಯಾರ್ಥಿಗಳಿಗೆ ಮಾರಕವಾಗಲಿದೆ ಎಂದು ಪ್ರತಿಭಟನಾಕಾರರು ದೂರಿದರು.
ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಲೈಸೆನ್ಸಿಯೇಟ್ ಪರೀಕ್ಷೆ ನಡೆಸಲಾಗುತ್ತದೆ. ಆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ವೈದ್ಯರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸುವುದಾಗಿ ಎನ್‌ಎಂಸಿ ಹೇಳಿದೆ. ಒಂದು ವೇಳೆ ಆಯೋಗ ರಚನೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸುವುದೇ ಆದರೆ, ಈ ಅಂಶ ಕೈಬಿಡಬೇಕು ಎಂದು ಒತ್ತಾಯಿಸಿದರು.







