ಭೀಮಾ ಕೋರೆಗಾಂವ್ ಹಿಂಸಾಚಾರ: ಅಂಬೇಡ್ಕರ್ ಮೊಮ್ಮಗನಿಂದ ಮಹಾರಾಷ್ಟ್ರ ಬಂದ್‌ಗೆ ಕರೆ

ಪುಣೆ, ಜ.2: ಸೋಮವಾರದಂದು ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ವೇಳೆ ಪುಣೆಯಲ್ಲಿ ನಡೆದ ಹಿಂಸಾಚಾರವನ್ನು ವಿರೋಧಿಸಿ ಬುಧವಾರದಂದು ಮಹಾರಾಷ್ಟ್ರ ಬಂದ್ ನಡೆಸುವಂತೆ ಡಾ. ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ ಯಶವಂತ್ ಅಂಬೇಡ್ಕರ್ ಕರೆನೀಡಿದ್ದಾರೆ. ಭಾರತೀಯ ಗಣತಂತ್ರ ಪಕ್ಷ-ಬಹುಜನ ಮಹಾಸಂಘದ ನಾಯಕರಾಗಿರುವ ಯಶವಂತ್ ಅಂಬೇಡ್ಕರ್, ಸೋಮವಾರ ಹಿಂಸಾಚಾರ ನಡೆಸಿದ ದುಷ್ಕರ್ಮಿಗಳು ಬಲಪಂಥೀಯ ಸಂಘಟನೆಗಳಿಗೆ ಸೇರಿದವರಾಗಿದ್ದು, ರಾಜ್ಯದ ದೇವೇಂದ್ರ ಫಡ್ನವೀಸ್ ಸರಕಾರದ ನೈತಿಕ ಬೆಂಬಲವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಆದಾಗ್ಯೂ ಶಾಂತಿ ಕಾಪಾಡುವಂತೆ ಕರೆ ನೀಡಿರುವ ಯಶವಂತ್, ಬುಧವಾರ ನಡೆಯಲಿರುವ ಬಂದ್ ಕೂಡಾ ಶಾಂತಿಯುತವಾಗಿರಲಿದೆ ಎಂದು ಭರವಸೆ ನೀಡಿದ್ದಾರೆ. ಸೋಮವಾರದಂದು ತಾನು ದಲಿತ ಸಮೂಹವನ್ನು ನಿಯಂತ್ರಿಸದೆ ಹೋಗಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತಿತ್ತು ಎಂದವರು ತಿಳಿಸಿದ್ದಾರೆ. ಸೋಮವಾರ ನಡೆದ ಗಲಭೆಯಿಂದ ರಾಜ್ಯದ ಅಲ್ಲಲ್ಲಿ ಹಿಂಸಾಚಾರಗಳು ಭುಗಿಲೆದ್ದಿದೆ. ಮುಂಬೈ ಮತ್ತು ಪುಣೆಯಲ್ಲಿ ಪ್ರತಿಭಟನೆಗಳು ಮತ್ತು ರ್ಯಾಲಿಗಳನ್ನು ಆಯೋಜಿಸಲಾಗಿದೆ. ಮುಂಬೈಯ ಚೆಂಬೂರ್ ಮತ್ತು ಘಾಟ್ಕೋಪರ್‌ಗಳಲ್ಲಿ ಪ್ರದರ್ಶನಕಾರರು ಅಂಗಡಿಗಳನ್ನು ಧ್ವಂಸ ಮಾಡಿದ್ದು ರೈಲು ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದಾರೆ.
ಗಾಳಿಸುದ್ದಿಗಳನ್ನು ನಂಬದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹಿಂಸಾಚಾರದಲ್ಲಿ ಒರ್ವ ಮೃತಪಟ್ಟಿದ್ದು ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿರುವ ಫಡ್ನವೀಸ್, ರಾಜಕೀಯ ಪಕ್ಷಗಳು ಯಾವುದೇ ನಿರ್ಣಾಯಕ ಹೇಳಿಕೆಗಳನ್ನು ನೀಡಬಾರದಾಗಿ ಮನವಿ ಮಾಡಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ವಿಪಕ್ಷಗಳು ರಾಜ್ಯದ ಬಿಜೆಪಿ-ಶಿವಸೇನೆ ಸರಕಾರದ ಮೇಲೆ ಟೀಕೆಗಳ ಸುರಿಮಳೆಗರೆದವು. ತಾನು ವಧು ಗ್ರಾಮದ ಜನರ ಜೊತೆ ಮಾತನಾಡಿದ್ದೆ. ಈ ವೇಳೆ ಸಂಘಪರಿವಾರಕ್ಕೆ ಸೇರಿದ ಕೆಲವು ಹೊರಗಿನ ವ್ಯಕ್ತಿಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ ಎಂದು ರಾಷ್ಟ್ರವಾದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
ಈ ದಾಳಿಯು ಸಂಪೂರ್ಣವಾಗಿ ಪೂರ್ವನಿರ್ಧರಿತವಾಗಿದೆ. ಆರೆಸ್ಸೆಸ್ ಗೆ ಸೇರಿದ ಕೆಲವು ವ್ಯಕ್ತಿಗಳು ಹಲವು ಸಮಯದಿಂದ ಈ ಪ್ರದೇಶದಲ್ಲಿ ಠಿಕಾಣಿ ಹೂಡಿದ್ದು ದಾಳಿಗೆ ಪ್ರಚೋದನೆ ನೀಡುವ ಕಾರ್ಯ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.