ಕೋಲಾರ: ರಾಜ್ಯ ಸಾರಿಗೆ ನಿಗಮ ಕೋಲಾರ ವಿಭಾಗ ರಾಜ್ಯಕ್ಕೆ ಪ್ರಥಮ

ಕೋಲಾರ,ಜ.2: ಸುಸಜ್ಜಿತ ಸಾರಿಗೆ ಸೇವೆಗೆ ಹೆಸರಾಗಿರುವ ಕರ್ನಾಟಕ ರಾಜ್ಯ ಸಾರಿಗೆ ನಿಗಮದ ಕೋಲಾರ ವಿಭಾಗ ಹೊಸ ವರ್ಷದ ಜ.1 ರಂದು ಒಂದು ದಿನವೇ 1.90 ಕೋಟಿ ರೂ ಆದಾಯ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮದ ಸಾಧನೆ ಮಾಡಿದೆ.
ಬೆಂಗಳೂರು ಕೇಂದ್ರ ವಿಭಾಗವನ್ನು ಹೊರತುಪಡಿಸಿದರೆ ಕೋಲಾರ ವಿಭಾಗ ಅತಿ ಹೆಚ್ಚು ಆದಾಯ ಸಂಗ್ರಹಿಸುವ ಮೂಲಕ ರಾಜ್ಯಕ್ಕೆ ಮೊದಲನೆ ಸ್ಥಾನ ಪಡೆದುಕೊಂಡಿದೆ.
ತಿಂಗಳಿಗೆ ಸರಾಸರಿ 17 ಕೋಟಿ ರೂ ರೆವೆನ್ಯೂ ಸಂಗ್ರಹಿಸುತ್ತಿರುವ ಕೋಲಾರ ವಿಭಾಗ ಜ.1 ರ ಒಂದು ದಿನವೇ 1.90 ಕೋಟಿ ರೂ ಸಂಗ್ರಹಿಸಿರುವ ಕುರಿತು ವಿಭಾಗದ ನಿಯಂತ್ರಣಾಧಿಕಾರಿ ಪ್ರಕಾಶ್‍ಬಾಬು ಸಂತಸ ವ್ಯಕ್ತಪಡಿಸಿದ್ದಾರೆ.
ಕೋಲಾರ ವಿಭಾಗ ಕೋಲಾರ,ಕೆಜಿಎಫ್, ಮುಳಬಾಗಿಲು, ಮಾಲೂರು,ಶ್ರೀನಿವಾಸಪುರ ಐದು ಘಟಕಗಳನ್ನು ಹೊಂದಿದ್ದು, ಜಿಲ್ಲೆಯ ಕಟ್ಟಕಡೆಯ ಗ್ರಾಮಕ್ಕೂ ತನ್ನ ಸೇವೆ ವಿಸ್ತರಿಸಿದೆ.
ಈ ವರ್ಷ 100 ಹೊಸ ಬಸ್ಸುಗಳನ್ನು ಓಡಿಸಲಾಗಿದ್ದು, ವಿಭಾಗ ಲಾಭದಲ್ಲಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ಪ್ರಕಾಶ್ ಬಾಬು ತಿಳಿಸಿದರು.
ಜ.1 ರಂದು ರಾಜ್ಯಕ್ಕೆ ಮೊದಲೆನ್ನುವಂತೆ 1.90 ಕೋಟಿ ರೂ ರೆವಿನ್ಯೂ ಸಂಗ್ರಹಿಸಲು ಕಾರಣರಾದ ನಿಗಮದ ಎಲ್ಲಾ ಅಧಿಕಾರಿಗಳು,ಸಿಬ್ಬಂದಿ, ಚಾಲಕ,ನಿರ್ವಾಹಕ,ಕಾರ್ಮಿಕರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಅನಧಿಕೃತವಾಗಿ ಓಡಾಡುವ ಖಾಸಗಿ ಬಸ್ಸುಗಳ ಓಡಾಟದ ಕುರಿತು ಸಾರಿಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ನಿಯಂತ್ರಣದ ಕೆಲಸ ನಡೆಯುತ್ತಿದೆ ಎಂದರು.
ನಾಗರೀಕರು ಸಾರಿಗೆ ಸಂಸ್ಥೆ ಬಸ್ಸನ್ನು ನಿಮ್ಮದೇ ವಾಹನವೆಂದು ತಿಳಿದು ಕಲ್ಲು ಹೊಡೆಯುವುದು, ಬೆಂಕಿ ಹಚ್ಚಿ ನಾಶಪಡಿಸುವಂತಹ ದುಷ್ಕೃತ್ಯಗಳಿಗೆ ಮುಂದಾಗದೇ ಸಹಕಾರ ನೀಡುವಂತೆ ನಿಗಮ ಮನವಿ ಮಾಡಿದೆ.







