ಸಮ ಸಮಾಜ ನಿರ್ಮಾಣಕ್ಕೆ ಪ್ರತಿಭಟನೆಯೊಂದೇ ಆಸ್ತ್ರ: ಡಿ.ಎಸ್.ವೀರಯ್ಯ

ತುಮಕೂರು,ಜ.02:ಸಮ ಸಮಾಜ ನಿರ್ಮಾಣದಲ್ಲಿ ನಮಗೆ ಅಗತ್ಯವಿರುವ ಸೌಲಭ್ಯ ಪಡೆಯಲು ಸಂಘಟಿತರಾಗಿ ಪ್ರತಿಭಟಿಸುವುದನ್ನು ಕಲಿಯಬೇಕಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಬಹುಜನ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಡಿ.ಎಸ್.ವೀರಯ್ಯ ತಿಳಿಸಿದ್ದಾರೆ.
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆದ ಕರ್ನಾಟಕ ಬಹುಜನ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ 3ನೇ ವರ್ಷದ ವಾರ್ಷಿಕೋತ್ಸವ ಹಾಗೂ ಡಿ.ಎಸ್.ವೀರಯ್ಯನವರ 69ನೇ ಜನ್ಮದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿದ ಮಾತನಾಡಿದ ಅವರು,ಜನಪರ ಹೋರಾಟದ ಮೂಲಕ ಸಂಘಟನೆಯನ್ನು ಬಲಗೊಳಿಸಬಹುದು ಎಂದರು.
ಸಮಾಜದಲ್ಲಿ ಮೇಲು-ಕೀಳು,ಬಡವ-ಶ್ರೀಮಂತ ಎಂಬ ಅಸಮಾನತೆ ದೂರವಾಗಬೇಕು. ಸಮಸಮಾಜ ನಿರ್ಮಾಣವಾಗಬೇಕಾದರೆ ಸಂಘಟನೆಯನ್ನು ಚುರುಕುಮಾಡಬೇಕು. ಪ್ರತಿಭಟನೆಯ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕು.ಪ್ರತಿಭಟನೆಯಲ್ಲಿ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸಿರಬೇಕು. ಅಂಬೇಡ್ಕರ್ ಕಂಡ ಕನಸುಗಳನ್ನು ಈಡೇರಿಸಲು ಪ್ರತಿಭಟನೆ ಅಸ್ತ್ರವಾಗಬೇಕು. ಪ್ರತಿಭಟನೆಯ ಅನಿವಾರ್ಯ ಆದರೆ,ಅದ್ದರಿಂದ ಅನಾಹುತ ಗಳಾಗಬಾರದು ಎಂದು ಸಲಹೆ ನೀಡಿದರು.
ಬ್ಯಾಂಕ್ ಅಧಿಕಾರಿಯಾಗಿದ್ದ ನಾನು ಅಂದಿನಿಂದಲೇ ಹೋರಾಟದಲ್ಲಿ ತೊಡಗಿಕೊಂಡಿದ್ದೆ. ದಲಿತರಲ್ಲಿ ಅಷ್ಟೇ ಬಡವರಿಲ್ಲ ಎಂದು ತಿಳಿದು ಬಹುಜನ ಸಂಘರ್ಷ ಸಮಿತಿ ಕಟ್ಟಿದೆ. ಇದೇ ವೇದಿಕೆಯ ವತಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ದಲಿತರು, ಕೊಳಗೇರಿ ನಿವಾಸಿಗಳು, ಅಲೆಮಾರಿಗಳು, ಭಿಕ್ಷುಕರು, ವೃದ್ಧರಿಗೆ ಸೌಲಭ್ಯ ಕೊಡಿಸಲು ಸಾಧ್ಯವಾಗಿದೆ.ಇವರೆಲ್ಲರಿಗೂ ಸರಕಾರದ ಸವಲತ್ತುಗಳು ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸಂವಿಧಾನ ಬದ್ದ ಹೋರಾಟ ನಮ್ಮದು ಎಂದರು.
ದಲಿತ ಮುಖಂಡ ಭಾನುಪ್ರಕಾಶ್ ಮಾತನಾಡಿ,ಡಿ.ಎಸ್.ವೀರಯ್ಯ ಅವರು ಇಡೀ ರಾಜ್ಯದಲ್ಲಿ ಸಂಘಟನೆ ಮಾಡುವುದನ್ನು ಯುವಕರಿಗೆ ತೋರಿಸಿಕೊಟ್ಟರು.ಅವರ ಮಾರ್ಗದರ್ಶನದಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಘಟನೆಯಲ್ಲಿ ಯುವಕರನ್ನು ಬಳಸಿಕೊಳ್ಳಬೇಕು. ಪ್ರತಿಷ್ಠೆಗೆ ಬಿದ್ದು ಸಂಘಟನೆಯನ್ನು ಹಾಳುಮಾಡಬಾರದು ಎಂದು ಸಲಹೆ ನೀಡಿದರು.
ಪತ್ರಕರ್ತ ಎಚ್.ದೇವರಾಜು ಮಾತನಾಡಿ,ಸಂಘಟನಾಚತುರ ಡಿ.ಎಸ್.ವೀರಯ್ಯ ಅವರಿಗೆ ಅರ್ಹವಾಗಿಯೇ ಮಂತ್ರಿಸ್ಥಾನ ಸಿಗಬೇಕಿತ್ತು. ಭವಿಷ್ಯದಲ್ಲಿಯಾದರೂ ಮಂತ್ರಿಸ್ಥಾನ ಸಿಕ್ಕಿ ಶೋಷಿತರ ಪರವಾಗಿ ಮತ್ತೊಷ್ಟು ಕೆಲಸ ಮಾಡಲು ಅವಕಾಶಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಅಧ್ಯಕ್ಷ ರಾಮಕೃಷ್ಣ,ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿದೇವಿ, ಶಾಂತರಾಜು, ಬಾಬು, ಶಿವಶ್ರೀ ಅನಾಥಾಶ್ರಮದ ಲೇಪಾಕ್ಷಿ ಮತ್ತಿತರರು ಉಪಸ್ಥಿತರಿದ್ದರು.







