ಇರಾನ್: ಮರುಕಳಿಸಿದ ಹಿಂಸಾಚಾರ; 9 ಸಾವು

ಟೆಹರಾನ್ (ಇರಾನ್), ಜ. 2: ಇರಾನ್‌ನಲ್ಲಿ ಸೋಮವಾರ ರಾತ್ರಿ ನಡೆದ ಹಿಂಸಾಚಾರದಲ್ಲಿ ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಕಾರರು ಪೊಲೀಸ್ ಠಾಣೆಗಳಿಗೆ ನುಗ್ಗಲು ಯತ್ನಿಸಿದಾಗ ಹಿಂಸಾಚಾರ ಸಂಭವಿಸಿದೆ ಎನ್ನಲಾಗಿದೆ.
ಸೋಮವಾರ ರಾಜಧಾನಿ ಟೆಹರಾನ್‌ನಲ್ಲಿ 100ಕ್ಕೂ ಅಧಿಕ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಟೆಹರಾನ್‌ನ ಡೆಪ್ಯುಟಿ ಗವರ್ನರ್ ‘ಇಲ್ನ’ ಸುದ್ದಿ ಸಂಸ್ಥೆಗೆ ತಿಳಿಸಿದರು.
ಇಸ್ಫಹಾನ್ ರಾಜ್ಯದ ಕಹ್ದರಿಜಾನ್ ಪಟ್ಟಣದಲ್ಲಿನ ಪೊಲೀಸ್ ಠಾಣೆಯೊಂದರ ಮೇಲೆ ದಾಳಿ ನಡೆಯಿತು. ಈ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಆರು ಪ್ರತಿಭಟನಕಾರರು ಮೃತಪಟ್ಟರು ಎಂದು ಸರಕಾರಿ ಟಿವಿ ವರದಿ ಮಾಡಿದೆ.
ಸಾಂಸ್ಕೃತಿಕ ನಗರ ಇಸ್ಫಹಾನ್ ಸಮೀಪದ ಪಟ್ಟಣಗಳಲ್ಲಿ ನಡೆದ ಹಿಂಸಾಚಾರದಲ್ಲಿ ಭದ್ರತಾ ಸಂಸ್ಥೆ ರೆವಲೂಶನರಿ ಗಾರ್ಡ್ಸ್‌ನ ಓರ್ವ ಯೋಧ ಹಾಗೂ ಓರ್ವ ದಾರಿಹೋಕ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದು ಘಟನೆಯಲ್ಲಿ ನಜಫಾಬಾದ್ ಸಮೀಪ ಓರ್ವ ಪೊಲೀಸ್ ಅಧಿಕಾರಿಯನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ.
ಇದರೊಂದಿಗೆ, 5 ದಿನಗಳ ಅವಧಿಯಲ್ಲಿ ನಡೆದ ಸರಕಾರ ವಿರೋಧಿ ಪ್ರತಿಭಟನೆಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. 2009ರಲ್ಲಿ ನಡೆದ ಬೃಹತ್ ಪ್ರತಿಭಟನೆಗಳ ಬಳಿಕ, ಇರಾನ್‌ನಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಪ್ರತಿಭಟನೆ ಇದಾಗಿದೆ.







