ಶಿವಮೊಗ್ಗ: ಅರ್ಜಿ ಸಲ್ಲಿಸುವ ಅವದಿ ವಿಸ್ತರಣೆಗೆ ಆಗ್ರಹಿಸಿ ಯುವ ಕಾಂಗ್ರೆಸ್‍ನಿಂದ ಮನವಿ

ಶಿವಮೊಗ್ಗ, ಜ. 2: ಮಹಾನಗರ ಪಾಲಿಕೆ ಆಶ್ರಯ ಯೋಜನಾ ಸಮಿತಿಯು ಆಶ್ರಯ ಯೋಜನೆಯಡಿ ವಸತಿ ರಹಿತ ಬಡವರಿಗೆ ಮನೆ ಹಂಚಿಕೆ ಮಾಡಲು ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಕಾಲಾವಧಿ ವಿಸ್ತರಣೆ ಮಾಡಬೇಕು ಎಂದು ಆಗ್ರಹಿಸಿ ಮಂಗಳವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲಿಕೆ ಕಚೇರಿಯಲ್ಲಿ ಆಯುಕ್ತ ಮುಲ್ಲೈ ಮುಹಿಲನ್‍ರವರಿಗೆ ಮನವಿ ಪತ್ರ ಅರ್ಪಿಸಿದರು.
ವಸತಿರಹಿತ ಬಿಪಿಎಲ್ ಕುಟುಂಬದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಾಯಧನ ಒಟ್ಟುಗೂಡಿಸಿ, ತಲಾ 5 ಲಕ್ಷ ರೂ. ವೆಚ್ಚದಲ್ಲಿ 360 ಚದರ ಅಡಿ ವಿಸ್ತೀರ್ಣದ 6100 ಮನೆ ನಿರ್ಮಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹವಾದುದಾಗಿದೆ. ಇದರಿಂದ ನಗರದ ಸ್ವಂತ ಸೂರು ಹೊಂದಲು ಸಾಧ್ಯವಾಗದೆ ಪರದಾಡುತ್ತಿರುವ ಅದೆಷ್ಟೊ ಕಡುಬಡವರಿಗೆ ಶಾಶ್ವತ ವಸತಿ ಸೌಲಭ್ಯ ದೊರಕಲಿದೆ.
ಈ ಯೋಜನೆಯಡಿ ಮುಂಗಡ ಹಣದ ಸಮೇತ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ನಾಗರೀಕರಿಗೆ ನಿಗದಿಪಡಿಸಿದ್ದ 2017 ನೆಯ ಡಿ. 30 ರ ದಿನಾಂಕ ಅಂತಿಮಗೊಂಡಿದೆ. ಆದರೆ ನಗರದ ಹಲವು ಕಡುಬಡವ ಫಲಾನುಭವಿಗಳು ಸಕಾಲದಲ್ಲಿ ಮುಂಗಡ ಹಣ ಹೊಂದಿಸಲು ಸಾಧ್ಯವಾಗದೆ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಕೆಲವರು ಅರ್ಜಿ ಮಾತ್ರ ಸಲ್ಲಿಸಿ, ಮುಂಗಡ ಹಣ ಪಾವತಿಸಿಲ್ಲ. ಜೊತೆಗೆ ಈ ಯೋಜನೆಯ ಬಗ್ಗೆ ಕೆಲವೆಡೆ ಸಾರ್ವಜನಿಕ ವಲಯದಲ್ಲಿ ಸೂಕ್ತ ಮಾಹಿತಿಯೂ ಇಲ್ಲವಾಗಿದ್ದು, ಗೊಂದಲವಿರುವುದು ಕಂಡುಬರುತ್ತಿದೆ. ಇದರಿಂದ ನಿರೀಕ್ಷೆಯ ಪ್ರಮಾಣದಲ್ಲಿ ಸಾರ್ವಜನಿಕ ವಲಯದಿಂದ ಅರ್ಜಿಗಳು ಸಲ್ಲಿಕೆಯಾಗಿಲ್ಲವಾಗಿದೆ ಎಂದು ಸಂಘಟನೆಯ ಮುಖಂಡರು ಹೇಳಿದ್ದಾರೆ.
ಹಾಗೆಯೇ ಮುಂಗಡ ಪಾವತಿಗೆ ಸಾಮಾನ್ಯ ವರ್ಗದವರಿಗೆ ನಿಗದಿಪಡಿಸಲಾಗಿರುವ 8200 ರೂ. ದರವು ದುಬಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತವು ಆಶ್ರಯ ಯೋಜನೆಯಡಿ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕಾಲಾವಾಕಾಶವನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಣೆ ಮಾಡಬೇಕು. ಮುಂಗಡ ಮೊತ್ತ ಕಡಿಮೆ ಮಾಡಬೇಕು. ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ವ್ಯಾಪಕ ಪ್ರಚಾರ ನಡೆಸಬೇಕು. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಮನವಿ ಅರ್ಪಿಸುವ ವೇಳೆ ಸಂಘಟನೆಯ ಜಿಲ್ಲಾಧ್ಯಕ್ಷ ಎಂ. ಪ್ರವೀಣ್ ಕುಮಾರ್, ನಗರ ಘಟಕದ ಅಧ್ಯಕ್ಷ ಎಚ್.ಪಿ. ಗಿರೀಶ್, ಸಂಘಟನೆಯ ರಾಜ್ಯ ಕಾರ್ಯದರ್ಶಿ ಆರ್. ಕಿರಣ್, ಟಿ.ವಿ.ರಂಜಿತ್, ಯುವ ಮುಖಂಡರಾದ ಚಂದು ಗೆಡ್ಡೆ, ಇ.ಟಿ. ನಿತಿನ್, ಶ್ರೀಧರ್, ವಿಜಯ್, ಪ್ರದೀಪ್ ರಾಮಿನಕೊಪ್ಪ ಸೇರಿದಂತೆ ಮೊದಲಾದವರಿದ್ದರು.







