ಗುಜರಾತ್: ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸೋಳಂಕಿ

ಅಹ್ಮದಾಬಾದ್, ಜ.2: ಗುಜರಾತ್‌ನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ ನೇತೃತ್ವದ ಸರಕಾರಕ್ಕೆ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪರ್ಷೋತ್ತಮ್ ಸೋಳಂಕಿ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾವ್‌ನಗರ ಕ್ಷೇತ್ರವನ್ನು ಪ್ರತಿನಿಧಿಸುವ 56ರ ಹರೆಯದ ಸೋಳಂಕಿಗೆ ಮೀನುಗಾರಿಕೆ ಇಲಾಖೆಯನ್ನು ವಹಿಸಲಾಗಿದೆ. ಕೋಲಿ ಸಮುದಾಯದವರಾದ ಸೋಳಂಕಿ ಮಂಗಳವಾರ ಮುಖ್ಯಮಂತ್ರಿ ರೂಪಾನಿಗೆ ಕರೆ ಮಾಡಿ ಕೋಲಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಂದಾಗ ಅಲ್ಲಿ ಹಲವಾರು ಮಂದಿಯಿದ್ದರು. ಆದ್ದರಿಂದ ತಮ್ಮ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಆಗಿಲ್ಲ. ಮುಂದಿನ ನಾಲ್ಕೈದು ದಿನದೊಳಗೆ ಕರೆ ಮಾಡಿ ಮಾತನಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಸೋಳಂಕಿ ತಿಳಿಸಿದ್ದಾರೆ.
ತನ್ನ ಭಾವನೆಗಳಿಗೆ ಗೌರವ ನೀಡದಿದ್ದರೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮುದಾಯದ ಹಿರಿಯದೊಂದಿಗೆ ಮಾತನಾಡಿ ನಿರ್ಧರಿಸುವುದಾಗಿಯೂ ಸೋಳಂಕಿ ತಿಳಿಸಿದ್ದಾರೆ. ಸೋಳಂಕಿ ನೀಡಿರುವ ಹೇಳಿಕೆ ರಾಜಕೀಯ ವರ್ತುಲದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹಿರಿಯ ಸಚಿವ ಭೂಪೇಂದ್ರ ಸಿನ್ಹ ಚುಡಾಸಮ ಅವರು ಸೋಳಂಕಿಯ ಮನೆಗೆ ಧಾವಿಸಿ ಅವರ ಜೊತೆ ಮಾತುಕತೆ ನಡೆಸಿದ್ದು ಅವರನ್ನು ಸಮಾಧಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.