ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಿ.ರಂದೀಪ್
ಮೈಸೂರು,ಜ.2: ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳದಲ್ಲಿ ಅನುಮತಿ ಇಲ್ಲದೆ ಫ್ಲೆಕ್ಸ್‌ಗಳನ್ನು ಅಳವಡಿಸುವುದರಿಂದ ಸಮಾನ ಮನಸ್ಥಿತಿಯಿಲ್ಲದ ಕೆಲವರಿಂದ ಕೋಮು ಗಲಭೆ ಸೃಷ್ಠಿಯಾಗುತ್ತದೆ ಎಂದರು.
ಗ್ರಾಮೀಣ ಭಾಗದವರು ಗ್ರಾಪಂನಲ್ಲಿ ಹಾಗೂ ನಗರ ಮತ್ತು ಪಟ್ಟಣ ಪ್ರದೇಶದವರು ಅಲ್ಲಿನ ಪಾಲಿಕೆ ಮತ್ತು ಪುರಸಭೆ ಮತ್ತು ಪಟ್ಟಣ ಸಭೆಗಳಲ್ಲಿ ಅನುಮತಿಯನ್ನು ಪಡೆಯಬೇಕು. ಹಲವು ನಿಬಂಧನೆಗಳನ್ನು ಅಳವಡಿಸಿ ಕ್ರಮವಹಿಸಲಾಗುವುದು. ಅನುಮತಿ ಇಲ್ಲದೆ ಫ್ಲೆಕ್ಸ್ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ .ಚನ್ನಣ್ಣನವರ್ ಮಾತನಾಡಿ, ಹಬ್ಬ ಮತ್ತು ಜಯಂತಿ ಹಾಗೂ ಹುಟ್ಟು ಹಬ್ಬದ ಫ್ಲೆಕ್ಸ್‌ಗಳನ್ನು ಹಾಕುವುದರಿಂದ ಹೆಚ್ಚು ದೌರ್ಜನ್ಯ ಪ್ರಕರಣಗಳು ಸಂಭವಿಸುತ್ತಿವೆ. ಮೈಸೂರು, ನಂಜನಗೂಡು ಹಾಗೂ ಹುಣಸೂರು ತಾಲೂಕುಗಳು ಸೂಕ್ಷ್ಮ ಪ್ರದೇಶಗಳಾಗಿವೆ. ಗ್ರಾಮೀಣ ಭಾಗದ 100 ರಿಂದ 150 ಹಳ್ಳಿಗಳಲ್ಲಿ ಹೋಟೆಲ್, ಕ್ಷೌರ ಶಾಪ್ ಹಾಗೂ ಪ್ರಮುಖ ರಸ್ತೆಯಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಬೇಕು ಎಂದು ಹೇಳಿದರು.
ಈ ಸಂದರ್ಭ ಮಹಿಳಾ ಮತ್ತು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಪ್ರಭಾ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕಿ ಭಾರತಿ ಮತ್ತಿತರರು ಉಪಸ್ಥಿತರಿದ್ದರು.





