ಹನೂರು: ರಸ್ತೆ ದುರಸ್ತಿಗೆ ಆಗ್ರಹ

ಹನೂರು,ಜ.2 : ಸಮೀಪದ ಆರ್.ಎಸ್.ದೊಡ್ಡಿ ಬಳಿಯ ಹೊರವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜಿಗೆ ತೆರಳುವ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ ಎಂದು ಪಾಲಕರು ದೂರಿದ್ದಾರೆ.
ಆರ್.ಎಸ್.ದೊಡ್ಡಿ ಗ್ರಾಮದಿಂದ 2 ಕಿ.ಮೀ ಅಂತರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಾಲೇಜು ಇದೆ. ಇಲ್ಲಿ ಚಾಮರಾಜನಗರ ಸೇರಿದಂತೆ ಕೊಳ್ಳೇಗಾಲ, ಹನೂರು, ಮಂಗಲ, ಕಣ್ಣೂರು, ಕಾಮಗೆರೆ, ಚಿಂಚಳ್ಳಿ, ಗುಂಡಾಪುರ, ಲೊಕ್ಕನಹಳ್ಳಿ, ಪಿ.ಜಿಪಾಳ್ಯ, ರಾಮಾಪುರ ಹಾಗೂ ಈ ಭಾಗದ ಇನ್ನಿತರ ಗ್ರಾಮಗಳಿಂದ 399 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಆರ್.ಎಸ್.ದೊಡ್ಡಿಯಿಂದ ಎಡಳ್ಳಿದೊಡ್ಡಿ ಮಾರ್ಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಈ ರಸ್ತೆಯ ಮೂಲಕ ಮೊರಾರ್ಜಿ ದೇಸಾಯಿ ಶಾಲಾ ಕಾಲೇಜಿಗೆ ತೆರಳುವ ಅಡ್ಡರಸ್ತೆಯು ತೀರಾ ಹದಗೆಟ್ಟಿದ್ದು, ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದೆಯಲ್ಲದೇ ಜಲ್ಲಿಕಲ್ಲುಗಳು ರಸ್ತೆಯ ಮೇಲೆಲ್ಲಾ ಹರಡಿಕೊಂಡಿದೆ. ಇದರಿಂದ ಬೈಕ್ ಸವಾರರು ಸಂಚರಿಸಲು ಹರಸಹಾಸ ಪಡಬೇಕಿದ್ದು, ತುಂಬಾ ತೊಂದರೆಯಾಗಿದೆ. ಅಲ್ಲದೇ ಕೆಲವು ವೇಳೆ ಜಲ್ಲಿಕಲ್ಲುಗಳನ್ನು ತಪ್ಪಿಸಲು ಹೋಗಿ ಬಿದ್ದು ಗಾಯಗೊಂಡಿರುವ ಘಟನೆಗಳು ಜರುಗಿದೆ.
ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಕಳೆದ 2 ವರ್ಷದ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆದುದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ರಸ್ತೆ ದುರಸ್ತಿಪಡಿಸುವಂತೆ ಮೊರಾರ್ಜಿ ದೇಸಾಯಿ ಶಾಲಾ, ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳ ಪಾಲಕರು ಒತ್ತಾಯಿಸಿದ್ದಾರೆ.





