ಬಹುಕೋಟಿ ರೂ. ಮೇವು ಹಗರಣ: ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ರಾಂಚಿ, ಜ.3: ಬಹುಕೋಟಿ ರೂ. ಮೇವು ಹಗರಣಕ್ಕೆ ಸಂಬಂಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಸಹಿತ 15 ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣವನ್ನು ಸಿಬಿಐನ ವಿಶೇಷ ನ್ಯಾಯಾಲಯ ಗುರುವಾರ(ಜ.4) ಪ್ರಕಟಿಸುವುದಾಗಿ ತಿಳಿಸಿದೆ.
ಸಿಬಿಐ ವಿಶೇಷ ನ್ಯಾಯಾಲಯ ಇಂದು ಶಿಕ್ಷೆಯನ್ನು ಪ್ರಕಟಿಸಬೇಕಾಗಿತ್ತು. ಆದರೆ, ವಕೀಲರೊಬ್ಬರು ನಿಧನರಾದ ಕಾರಣ ಅಂತಿಮ ತೀರ್ಪನ್ನು ನಾಳೆಗೆ ಮುಂದೂಡಿದೆ.
ಲಾಲೂ ಅವರ ಪುತ್ರ ತೇಜಸ್ವಿ ಯಾದವ್, ಆರ್ಜೆಡಿ ಮುಖಂಡ ರಘುವಂಶ ಯಾದವ್ ಹಾಗೂ ಮನೋಜ್ ಝಾಗೆ ನ್ಯಾಯಾಲಯಕ್ಕೆ ಅಪಮಾನ ಮಾಡಿದ ಆರೋಪದಲ್ಲಿ ನೋಟಿಸ್ ನೀಡಲಾಗಿದೆ. ಸಿಬಿಐ ನ್ಯಾಯಾಲಯ 20 ವರ್ಷ ಹಳೆಯದಾದ 900 ಕೋ.ರೂ. ಮೇವು ಹಗರಣದ ವಿಚಾರಣೆಯನ್ನು ಕಳೆದ ವರ್ಷ ಡಿ.13ಕ್ಕೆ ಕೊನೆಗೊಳಿಸಿತ್ತು.
ರಾಷ್ಟ್ರೀಯ ಜನತಾದಳ(ಆರ್ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಸಹಿತ 15 ಜನರು ದೋಷಿಗಳೆಂದು ಡಿ.23 ರಂದು ತೀರ್ಪು ನೀಡಿತ್ತು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಬಿಹಾರ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಸಹಿತ ಏಳು ಜನರನ್ನು ದೋಷಮುಕ್ತಗೊಳಿಸಲಾಗಿತ್ತು.
ಲಾಲೂ ಪ್ರಸಾದ್ಗೆ 70 ವರ್ಷ ವಯಸ್ಸಾಗಿದ್ದು, ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅವರಿಗೆ ಕಡಿಮೆ ಶಿಕ್ಷೆ ನೀಡುವಂತೆ ಒತ್ತಾಯಿಸುತ್ತೇವೆ. ಅವರಿಗೆ 3ರಿಂದ 7 ವರ್ಷ ಶಿಕ್ಷೆ ಆಗಬಹುದು. ಒಂದು ವೇಳೆ ಮೂರು ವರ್ಷ ಶಿಕ್ಷೆ ವಿಧಿಸಿದರೆ, ಶಿಕ್ಷೆ ಪ್ರಕಟಗೊಂಡ ತಕ್ಷಣ ಜಾಮೀನು ಪಡೆಯಬಹುದು ಎಂದು ಲಾಲು ಪ್ರಸಾದ್ ವಕೀಲರು ಹೇಳಿದ್ದಾರೆ.
ಲಾಲೂ ಪ್ರಸಾದ್ ಪ್ರಸ್ತುತ ರಾಂಚಿಯ ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿನಲ್ಲಿದ್ದು, ವಿಚಾರಣೆಗಾಗಿ ಜೈಲಿನಿಂದ ಕೋರ್ಟಿಗೆ ಹಾಜರಾಗಿದ್ದರು.