ನ್ಯಾಯಬೆಲೆ ಅಂಗಡಿ ಇನ್ನು ‘ಸೇವಾ ಸಿಂಧು ಕೇಂದ್ರ’: ಆಹಾರ ಸಚಿವ ಖಾದರ್

ಬೆಂಗಳೂರು, ಜ. 3: ರಾಜ್ಯದಲ್ಲಿನ ನ್ಯಾಯಬೆಲೆ ಅಂಗಡಿಗಳು ಇನ್ನು ಮುಂದೆ ‘ಸೇವಾ ಸಿಂಧು ಕೇಂದ್ರ’ಗಳಾಗಿ ಕಾರ್ಯ ನಿರ್ವಹಿಸಲಿವೆ. ಬಸ್, ರೈಲ್ವೆ, ವಿಮಾನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳನ್ನು ಜನ ಸಾಮಾನ್ಯರಿಗೆ ಒದಗಿಸಲಿವೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಒದಗಿಸುವುದರ ಜೊತೆಗೆ ಜನರಿಗೆ ಅಗತ್ಯ ಸೇವೆಗಳನ್ನು ಸೇವಾ ಸಿಂಧು ಕೇಂದ್ರಗಳ ಮೂಲಕ ನೀಡಲಾಗುವುದು. ಈ ಸಂಬಂಧ ಸಿಎಸ್‌ಸಿ/ಎಸ್‌ಪಿಡಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಇದರಿಂದ ನ್ಯಾಯಬೆಲೆ ಅಂಗಡಿಯವರಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ಸುಮಾರು 20ಸಾವಿರ ರೂ.ಆದಾಯ ಸಿಗಲಿದೆ. ಅಲ್ಲದೆ, ಫಲಾನುಭವಿಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಮೂಲಕ ಪಡಿತರ ವಿತರಣೆಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.
1.20ಲಕ್ಷ ರೂ.ಆದಾಯ ಮಿತಿಯಲ್ಲಿರುವ ಕುಟುಂಬಗಳನ್ನು ಆದ್ಯತಾ(ಬಿಪಿಎಲ್) ಹಾಗೂ 1.20 ಲಕ್ಷಕ್ಕೂ ಅಧಿಕ ಆದಾಯವಿರುವ ಕುಟುಂಬಗಳನ್ನು ಆದ್ಯತಾ ರಹಿತ ಎಂದು ಗುರುತಿಸಲಾಗಿದೆ. ಹೊಸಪಡಿತರ ಚೀಟಿಗೆ 15 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 11 ಲಕ್ಷ ಮಂದಿಗೆ ಈಗಾಗಲೇ ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿ ರವಾನಿಸಲಾಗಿದೆ ಎಂದು ಹೇಳಿದರು.
ಉಳಿದ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅರ್ಹರಿಗೆ ಶೀಘ್ರದಲ್ಲೆ ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿ ಕಳುಹಿಸಲಾಗುವುದು ಎಂದ ಅವರು, 26 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಪಡಿತರ ಚೀಟಿ ಪಡೆಯಲು ನಿಗದಿಪಡಿಸಿದ್ದ ಮಾನದಂಡ ಸರಳೀಕರಿಸಲಾಗಿದೆ ಎಂದರು.
ಪ್ರಪ್ರಥಮ ರಾಜ್ಯ: ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿದ ಪ್ರಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ಆ ಮೂಲಕ ಪಡಿತರ ವಿತರಣೆಯಲ್ಲಿ ಸೋರಿಕೆ ತಡೆಗಟ್ಟಿದ್ದು, ಇದರಿಂದ 50 ಕೋಟಿ ರೂ.ಉಳಿತಾಯವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ 1.15 ಕೋಟಿ ಆದ್ಯತಾ ಕುಟುಂಬಗಳಿವೆ ಎಂದರು.
ಅನಿಲಭಾಗ್ಯ: ಅಡುಗೆ ಅನಿಲ ರಹಿತ ಆದ್ಯತಾ ಕುಟುಂಬಗಳಿಗೆ ಶೀಘ್ರದಲ್ಲೆ ಅನಿಲಭಾಗ್ಯ ಕಲ್ಪಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದ ಅವರು, ಕೇಂದ್ರದ ಉಜ್ವಲ ಹಾಗೂ ರಾಜ್ಯದ ಅನಿಲಭಾಗ್ಯ ಯೋಜನೆ ಅನುಷ್ಠಾನ ಸಂಬಂಧದ ಗೊಂದಲ ನಿವಾರಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
‘ಅನ್ನಭಾಗ್ಯ ಯೋಜನೆ ಜನಪ್ರಿಯತೆಯಿಂದ ನಮ್ಮ ಫೋಟೋವನ್ನು ಹಾಕಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸುತ್ತಿದ್ದಾರೆ. ಆದರೆ, ಬಿಜೆಪಿ ಆಡಳಿತವಿರುವ ಯಾವ ರಾಜ್ಯದಲ್ಲಿಯೂ ‘ಅನ್ನಭಾಗ್ಯ’ ಯೋಜನೆ ಇಲ್ಲ. ಕೇಂದ್ರಕ್ಕೆ ಬದ್ಧತೆ ಇದ್ದರೆ ಅನ್ನಭಾಗ್ಯ ಯೋಜನೆ ದೇಶಾದ್ಯಂತ ಜಾರಿಗೊಳಿಸಲಿ’
-ಯು.ಟಿ.ಖಾದರ್ ಆಹಾರ ಸಚಿವ







