ಜ್ಯೋತಿಷಿ, ಸಮೀಕ್ಷೆಗಳ ಮಾತು ಬಿಡಿ, 113 ಸ್ಥಾನಗಳನ್ನು ಗೆಲ್ಲುತ್ತೇವೆ: ಕುಮಾರಸ್ವಾಮಿ

ಬೆಂಗಳೂರು, ಜ.3: ಜ್ಯೋತಿಷಿಗಳ ಮಾತು ನಾನು ನಂಬುವುದಿಲ್ಲ. ಇನ್ನು ಮಾಧ್ಯಮಗಳ ಸಮೀಕ್ಷೆಗಳು ಏನೇ ಇರಲಿ, 2018ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 113 ಸ್ಥಾನ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ್‌ಸ್ವಾಮಿ ಹೇಳಿದ್ದಾರೆ.
ಬುಧವಾರ ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರು ಹಿರಿಯ ನಾಗರಿಕರೊಂದಿಗೆ ಏರ್ಪಡಿಸಿದ್ದ ಸಂವಾದವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಮಾಧ್ಯಮಗಳು ಪ್ರಕಟಿಸುತ್ತಿರುವ ಚುನಾವಣೆ ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಪಕ್ಷಕ್ಕೆ 40 ರಿಂದ 50 ದೊರೆಯಲಿದೆ ಎಂದು ಹೇಳುತ್ತಿದ್ದಾರೆ. ಆದರೆ, ಇದನ್ನು ನಾನು ನಂಬುವುದಿಲ್ಲ. ಅಲ್ಲದೆ, ಮುಂದಿನ ಬಾರಿ ಇತರೆ ಪಕ್ಷಗಳೊಂದಿಗೆ ಕೈಜೋಡಿಸಿ ಸರಕಾರ ರಚಿಸುವ ಚಿಂತನೆಯೂ ನನಗಿಲ್ಲ. ಬದಲಾಗಿ 113 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಹಿಡಿಯುವೆ ಎಂದು ಕುಮಾರಸ್ವಾಮಿ ನುಡಿದರು.
ಮುಖ್ಯಮಂತ್ರಿಯಾದರೆ, ಜನರನ್ನು ದೂರ ಇಡಲು ಇಚ್ಛಿಸುವುದಿಲ್ಲ. ಅಲ್ಲದೆ, ವಿಧಾನಸೌಧದ ಸುತ್ತಲೂ ಇರುವ ಕಬ್ಬಿಣದ ಸರಳುಗಳನ್ನು ಕಿತ್ತು ಹಾಕಿಸುತ್ತೇನೆ. ಜೊತೆಗೆ ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ, ರಾಜ್ಯದ ಜನತೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಇರುತ್ತೆ ಎಂದ ಅವರು, ಮುಖ್ಯಮಂತ್ರಿಗಳ ಶರ್ಟ್ ಹಿಡಿದು, ನನ್ನ ಸಮಸ್ಯೆ ಬಗೆಹರಿಸಿ ಎಂದು ಕೇಳುವ ಅಧಿಕಾರವನ್ನು ಜನಸಾಮಾನ್ಯರಿಗೆ ನೀಡುತ್ತೇನೆ ಎಂದರು.
ಸಾಲ ಮನ್ನಾ: ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದರೆ, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಲಾಗುವುದು. ಅಲ್ಲದೆ, ರೈತರು ಸಾಲದಿಂದ ಸಮಸ್ಯೆಗೆ ಸಿಲುಕಿದ್ದಾರೆ. ಅವರಿಗೆ ಸೂಕ್ತ ಸೌಲಭ್ಯ ಮತ್ತು ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲಾಗುವುದೆಂದು ಅವರು ಹೇಳಿದರು.
ಸರಕಾರಿ ಶಾಲೆಗಳು ಹಾಗೂ ಆಸ್ಪತ್ರೆಗಳ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಹಿರಿಯ ನಾಗರಿಕರು ಅದರಲ್ಲೂ ಹಳ್ಳಿಯಲ್ಲಿರುವವರಿಗೆ ಅವರು ಬದುಕಿರುವವರೆಗೂ 5 ಸಾವಿರ ರೂ. ಮಾಸಾಶನ ನೀಡಲಾಗುವುದು. ಈ ಕಾರಣಕ್ಕಾದರೂ ವಯಸ್ಸಾದ ತಂದೆ ತಾಯಿಗಳನ್ನು ಮಕ್ಕಳು ನೋಡಿಕೊಳ್ಳುವಂತಾಗಲಿ ಎಂಬುದು ನಮ್ಮ ಉದ್ದೇಶ ಎಂದು ಕುಮಾರಸ್ವಾಮಿ ತಿಳಿಸಿದರು.
ವಯಸ್ಸಾದ ಹಿರಿಯ ಜೀವಿಗಳಿಗೆ ಪಿಂಚಣಿ, ಭದ್ರತೆ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದ ಅವರು, ಮೆಟ್ರೋ ಸೇರಿದಂತೆ ರಾಜ್ಯದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಲ್ಲಿ ಒಂದೇ ಒಂದು ಲೇಔಟ್ ನಿರ್ಮಾಣ ಮಾಡದ ಬಿಡಿಎ 5 ಸಾವಿರ ಕೋಟಿ ರೂ.ಗಳಿಗೂ ಅಧಿಕ ಸಾಲದಲ್ಲಿ ಸಿಲುಕಿದೆ. ಬಡಾವಣೆಗಾಗಿ ಗುರುತಿಸುವ ಜಮೀನನ್ನು ಡಿನೋಟಿಫಿಕೇಷನ್ ಮಾಡುವುದು, ಕೈಬಿಡುವುದು ಮಾಡಲಾಗುತ್ತಿದೆ. ಇದರಿಂದ ಜನರಿಗೆ ನಿವೇಶನ ಸಿಕ್ಕಿಲ್ಲ. ಕೂಲಿ ಕಾರ್ಮಿಕರು, ಆಟೊ ರಿಕ್ಷಾ ಚಾಲಕರು, ತರಕಾರಿ ಮಾರುವವರು ಸೇರಿದಂತೆ ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ಬಿಡಿಎ ಫ್ಲಾಟ್‌ಗಳು ಸಿಗುವಂತೆ ಮಾಡಲು ಜಮೀನು ನೀಡಿ, ಹಣವನ್ನೂ ನೀಡಿದ್ದೆ. ಪ್ರತಿ ಫ್ಲಾಟ್‌ಗಳನ್ನು 25 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ. ಇಷ್ಟೊಂದು ಹಣವನ್ನು ಬಡ ಜನರು ನೀಡಲು ಹೇಗೆ ಸಾಧ್ಯ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಸಂವಾದದಲ್ಲಿ ಶಾಸಕ ಕೆ.ಗೋಪಾಲಯ್ಯ, ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಕಾಶ್ ಸೇರಿ ಪ್ರಮುಖರಿದ್ದರು.
ಜಾಹೀರಾತಿಗೆ ಹಣ
ಕೇಂದ್ರ ಮತ್ತು ರಾಜ್ಯ ಸರಕಾರ ಜನಸಾಮಾನ್ಯರ ಹಣವನ್ನು ಜಾಹೀರಾತಿನ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಿದೆ. ಅದೇ ಹಣವನ್ನು ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳಬಹುದಿತ್ತು. ಬಿಎಂಟಿಸಿ, ಕೆಪಿಟಿಸಿಎಲ್ ಸಂಪೂರ್ಣ ನಷ್ಟದಲ್ಲಿದೆ. ಆದರೂ ಇಂಧನ ಸಚಿವರು ಪ್ರತಿದಿನ ವಾಹಿನಿಗಳಲ್ಲಿ 50 ಬಾರಿ ಎರಡೆರಡು ನಿಮಿಷದ ಜಾಹೀರಾತು ನೀಡುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೆಸರೇಳದೆ ಆರೋಪಿಸಿದರು.







