ಭಯೋತ್ಪಾದಕ ದಾಳಿಗಳಲ್ಲಿ ಯೋಧರ ಹತ್ಯೆ ಅವಮಾನ: ಮುಲಾಯಂ

ಹೊಸದಿಲ್ಲಿ,ಜ.3: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಯೋಧರ ಹತ್ಯೆ ಘಟನೆಗಳ ಕುರಿತು ಬುಧವಾರ ಸರಕಾರವನ್ನು ತರಾಟೆಗೆತ್ತಿಕೊಂಡ ಹಿರಿಯ ಎಸ್‌ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರು, ಗಡಿಯಾಚೆಯ ಭಯೋತ್ಪಾದನೆಯ ವಿರುದ್ಧ ಪ್ರತಿದಾಳಿ ನಡೆಸಲು ಸೇನೆಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡುವಂತೆ ಆಗ್ರಹಿಸಿದರು.
ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ಮಾಜಿ ರಕ್ಷಣಾ ಸಚಿವರೂ ಆದ ಮುಲಾಯಂ, ಭಯೋತ್ಪಾದಕರು ಯೋಧರನ್ನು ಗುರಿಯಾಗಿಸಿಕೊಂಡು ಪದೇಪದೇ ನಡೆಸುತ್ತಿರುವ ದಾಳಿಗಳು ಜಾಗತಿಕ ಮಟ್ಟದಲ್ಲಿ ನಮ್ಮ ಸಶಸ್ತ್ರ ಪಡೆಗಳ ವರ್ಚಸ್ಸನ್ನು ಕುಂದಿಸಿವೆ ಎಂದರಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಉಗ್ರವಾದ ಸಮಸ್ಯೆಯನ್ನು ಎದುರಿಸಲು ಸರಕಾರಕ್ಕೆ ಯಾವ ಸಂದಿಗ್ಧತೆಯಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ಡಿ.31ರಂದು ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿ ಐವರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಮುಲಾಯಂ, ನಮ್ಮ ಯೋಧರನ್ನು ನಿಯಮಿತವಾಗಿ ಹತ್ಯೆಗೈಯಲಾಗುತ್ತಿದೆ. ಹೀಗೇಕಾಗುತ್ತಿದೆ ಎಂದು ಸರಕಾರವು ತಿಳಿಸಬೇಕು. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಪ್ರತಿದಾಳಿ ನಡೆಸಲು ಸಶಸ್ತ್ರ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯವನ್ನು ನೀಡಬೇಕು ಎಂದು ಹೇಳಿದರು.