ಹನೂರು:10 ದಿನದೊಳಗೆ ಬಾಡಿಗೆ ಪಾವತಿಸಲು ಸೂಚನೆ
.jpg)
ಹನೂರು,ಜ.3: ಮುಂದಿನ 10 ದಿನಗಳೊಳಗಾಗಿ ಎಲ್ಲಾ ಬಾಡಿಗೆದಾರರು ಬಾಕಿ ಉಳಿದಿರುವ ಬಾಡಿಗೆಯನ್ನು ಪಾವತಿ ಮಾಡಬೇಕು. ಇಲ್ಲವಾದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ಜಪ್ತಿ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಪ.ಪಂ ಸದಸ್ಯರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ಮಮತಾ ಮಹಾದೇವು ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ತುರ್ತು ಸಭೆಯನ್ನು ಏರ್ಪಡಿಸಲಾಗಿತ್ತು.
ಸಭೆಯಲ್ಲಿ ಪಟ್ಟಣ ಪಂಚಾಯಿತಿಗೆ ವಾಣಿಜ್ಯ ಮಳಿಗೆಗಳಿಂದ ಬರಬೇಕಿದ್ದ 10 ದಿನಗಳೊಳಗಾಗಿಯಾಗದಿರುವ ಬಗ್ಗೆ ಕೆಲ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂಬಂಧ ಈಗಾಗಲೇ ಕಳೆದ 3 ದಿನಗಳ ಹಿಂದೆಯೇ ಕೆಲ ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿಯಲಾಗಿದೆ. ಈ ಪೈಕಿ ಕೆಲವರು ಅವರೇ ಬೀಗ ಒಡೆದು ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದಾರೆ. ಆದರೂ ಅಂತಹ ಬಾಡಿಗೆದಾರರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕುಪಿತರಾದರು. ಬಳಿಕ ಕೆಲ ಕಾಲಪ.ಪಂ ಅಧಿಕಾರಿಗಳು ಮತ್ತು ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು.
ಬಳಿಕ ಸಭೆಯಲ್ಲಿ ಚರ್ಚಿಸಿ ಜ.8ರ ಒಳಗಾಗಿ ಎಲ್ಲಾ ಬಾಡಿಗೆದಾರರೂ ಬಾಡಿಗೆ ಪಾವತಿಸುವಂತೆ ನೋಟೀಸ್ ನೀಡಬೇಕು. ಒಂದೊಮ್ಮೆ ನೋಟೀಸ್ ಪಡೆಯಲು ಯಾರೂ ಇಲ್ಲವಾದಲ್ಲಿ ಅವರವರ ಅಂಗಡಿಯ ಮುಂದೆ ನೋಟೀಸ್ ಅಂಟಿಸಿ ಚಿತ್ರೀಕರಣ ಮಾಡಬೇಕು ಎಂದು ಸೂಚಿಸಿದರು.
ಬಾಡಿಗೆದಾರರಿಂದ ಸದಸ್ಯರ ಭೇಟಿ: ಈ ವೇಳೆ ಸಭೆಯ ತೀರ್ಮಾನಕ್ಕಾಗಿ ಕಾದು ನಿಂತಿದ್ದ ಬಾಡಿಗೆದಾರರು ಪ.ಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಸದ್ಯಕ್ಕೆ ಒಂದೆರೆಡು ತಿಂಗಳ ಬಾಡಿಗೆ ಹಣವನ್ನು ಪಾವತಿ ಮಾಡಲು ಸಿದ್ಧರಿದ್ದೇವೆ. ಮುಂದಿನ ದಿನಗಳಲ್ಲಿ ಬಾಕಿ ಹಣವನ್ನು ಹಂತ ಹಂತವಾಗಿ ಪಾವತಿಸುವುದಾಗಿ ಮನವಿ ಮಾಡಿದರು. ಇದಕ್ಕೆ ಒಪ್ಪದ ಸದಸ್ಯರು ಜ.8ರವರೆಗೆ ನೀಡಿದ್ದ ಗಡುವನ್ನು ಜ.12ರ ತನಕ ವಿಸ್ತರಿಸಲಾಗುವುದು. ಆ ದಿನದ ಒಳಗಾಗಿ 2-3 ತಿಂಗಳ ಬಾಡಿಗೆಯನ್ನು ಹೊರತುಪಡಿಸಿ ಎಲ್ಲಾ ಬಾಕಿ ಬಾಡಿಗೆಯನ್ನು ಪಾವತಿಸಬೇಕು. ಇನ್ನುಳಿದ 2-3 ತಿಂಗಳ ಬಾಡಿಗೆ ಹಣವನ್ನು ಮುಂಬರುವ ತಿಂಗಳುಗಳಲ್ಲಿ ಪಾವತಿ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಸದಸ್ಯರಾದ ಜಯಪ್ರಕಾಶ್‍ಗುಪ್ತ, ಬಾಲರಾಜ್‍ನಾಯ್ಡು, ವೆಂಕಟೇಶ್, ಬಸವರಾಜು, ಮಹದೇವಮ್ಮ, ನಾಗಣ್ಣ, ರಾಜುಗೌಡ , ಮುಖ್ಯಾಧಿಕಾರಿ ಎಸ್.ಡಿ.ಮೋಹನ್‍ಕೃಷ್ಣ ಪ.ಪಂ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಹಾಜರಿದ್ದರು.







