ಇಶ್ರತ್ ಜಹಾನ್ ಪ್ರಕರಣ: ನ್ಯಾಯಾಲಯದ ಸಮನ್ಸ್ ಪ್ರಶ್ನಿಸಿದ ಗುಪ್ತಚರ ಇಲಾಖೆ ಅಧಿಕಾರಿಗಳು

ಅಹ್ಮದಾಬಾದ್, ಜ.3: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ತಮ್ಮ ವಿರುದ್ಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ಜಾರಿ ಮಾಡಿರುವುದನ್ನು ಇಬ್ಬರು ಗುಪ್ತಚರ ಇಲಾಖೆಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ಅಧಿಕಾರಿಗಳ ಮೇಲ್ಮನವಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶರಾದ ಜೆ.ಕೆ ಪಾಂಡ್ಯ ಜನವರಿ 6ರಂದು ಆಲಿಸಲಿದ್ದಾರೆ.
ಕಳೆದ ತಿಂಗಳು ಸಿಬಿಐ ಪ್ರಕರಣಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೇಂದ್ರ ಗುಪ್ತಚರ ಇಲಾಖೆಯ ವಿಶೇಷ ನಿರ್ದೇಶಕ ರಜಿಂದರ್ ಕುಮಾರ್ ಮತ್ತು ಅಧಿಕಾರಿಗಳಾದ ಎಂ.ಎಸ್ ಸಿನ್ಹಾ, ರಾಜೀವ್ ವಾಂಖೆಡೆ ಮತ್ತು ಟಿ.ಎಸ್ ಮಿತ್ತಲ್ ವಿರುದ್ಧ ನೋಟಿಸ್ ಜಾರಿ ಮಾಡಿತ್ತು. ನಾಲ್ಕು ವರ್ಷಗಳ ಹಿಂದೆ ಸಿಬಿಐ ತನ್ನ ಪೂರಕ ದೋಷಾರೋಪ ಪಟ್ಟಿಯಲ್ಲಿ ಈ ನಾಲ್ವರು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿತ್ತು. ಸಿಬಿಐ ಈ ನಾಲ್ವರು ಅಧಿಕಾರಿಗಳ ವಿರುದ್ಧ ಹತ್ಯೆ, ಅಪರಾಧ ಪಿತೂರಿ, ಕಾನೂನುಬಾಹಿರ ಇರಿಸುವಿಕೆ ಮತ್ತು ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿತ್ತು. ಆದರೆ ವಿಚಾರಣೆಗೆ ಅನುಮತಿ ಸಿಗದ ಕಾರಣ ಇಷ್ಟು ವರ್ಷ ಈ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮಕೈಗೊಳ್ಳಲು ಸಾಧ್ಯವಾಗಿರಲಿಲ್ಲ.
ಈ ವಿಷಯವನ್ನು ಸಿಬಿಐ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ತಿಳಿಸಿದಾಗ ನ್ಯಾಯಾಲಯ ಕೂಡಲೇ ಈ ನಾಲ್ಕು ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡಿತು.
ಇಶ್ರತ್ ಜಹಾನ್ ಪ್ರಕರಣದಲ್ಲಿ ಸಿಬಿಐ ಸಿದ್ಧಪಡಿಸಿದ್ದ ಮೊದಲ ದೋಷಾರೋಪ ಪಟ್ಟಿಯಲ್ಲಿ ಐಪಿಎಸ್ ಅಧಿಕಾರಿ ಪಿ.ಪಿ ಪಾಂಡೆ, ಡಿ.ಜಿ ವಂಝಾರ ಮತ್ತು ಜಿ.ಎಲ್ ಸಿಂಘಲ್ ಸಹಿತ ಗುಜರಾತ್ ಪೊಲೀಸ್ ಇಲಾಖೆಯ ಏಳು ಅಧಿಕಾರಿಗಳನ್ನು ಆರೋಪಿಗಳೆಂದು ಹೆಸರಿಸಿತ್ತು. ಇವರೆಲ್ಲರೂ ಈಗ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ.
ಮುಂಬೈಯ ಮುಂಬ್ರಾ ನಿವಾಸಿಯಾಗಿದ್ದ 19ರ ಹರೆಯದ ಇಶ್ರತ್ ಜಹಾನ್, ಆಕೆಯ ಸ್ನೇಹಿತ ಜಾವೇದ್ ಶೇಕ್ ಅಲಿಯಾಸ್ ಪ್ರಾಣೇಶ್ ಮತ್ತು ಇತರ ಇಬ್ಬರನ್ನು ಜೂನ್ 2004ರಲ್ಲಿ ನಗರದ ಹೊರವಲಯದಲ್ಲಿ ಅಹ್ಮದಾಬಾದ್ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.