5233 ಕೋಟಿ ರೂ.ಬಂಡವಾಳ ಹೂಡಿಕೆಗೆ ಒಪ್ಪಿಗೆ: ಆರ್.ವಿ.ದೇಶಪಾಂಡೆ

ಬೆಂಗಳೂರು,ಜ.3: ಭಾರಿ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ 5233.82 ಕೋಟಿ. ರೂ. ಬಂಡವಾಳ ಹೂಡಿಕೆಯ 52 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.
ಇದರಿಂದ ಸುಮಾರು 63,913 ಜನರಿಗೆ ಉದ್ಯೋಗಾವಕಾಶ ಸೃಜನೆಯಾಗಲಿದೆ. ಆಟೋಮೊಬೈಲ್ ಸೆಕ್ಟರ್, ಎಲೆಕ್ಟ್ರಿಕಲ್ ವೈಕಲ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಆರ್.ಅಂಡ್.ಡಿ., ಏರೋಸ್ಪೇಸ್ ಕಾಂಪೊನೆಂಟ್ಸ್, ಎಲೆಕ್ಟ್ರಾನಿಕ್ಸ್, ಜವಳಿ ಮತ್ತು ಸಿದ್ಧ ಉಡುಪು ತಯಾರಿಕೆ, ಗ್ಯಾಲ್ವನೈಸಡ್ ಸ್ಟೀಲ್ ಟ್ಯೂಬ್ಸ್ ಅಂಡ್ ಪೈಪ್ಸ್, ಖಾಸಗಿ ಕೈಗಾರಿಕಾ ಪಾರ್ಕ್/ಐ.ಟಿ.ಪಾರ್ಕ್ ಹಾಗೂ ಆಹಾರ ಉತ್ಪನ್ನ ಆಧಾರಿತ ವಲಯಗಳ ವಿವಿಧ ಯೋಜನೆಗಳಿಗೆ ಸಮಿತಿಯು ಅನುಮೋದನೆ ನೀಡಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಗಳ ಪೈಕಿ 2369.56 ಕೋಟಿ ರೂ.ಬಂಡವಾಳ ಹೂಡಿಕೆಯ ಯೋಜನೆಗಳು ಬೆಂಗಳೂರಿನಲ್ಲಿ ಜಾರಿಯಾಗಲಿದ್ದು, ಉಳಿದ 2864.26 ಕೋಟಿ ರೂ.ಬಂಡವಾಳ ಹೂಡಿಕೆಯ ಯೋಜನೆಗಳು ರಾಜ್ಯದ ಇತರೆ ಭಾಗದಲ್ಲಿ ಜಾರಿಗೊಳ್ಳಲಿದೆ. ಇದು ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಯ ದ್ಯೋತಕವಾಗಿದೆ ಎಂದು ಸಚಿವರು ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಈ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಕೈಗಾರಿಕಾ ಅಭಿವೃದ್ಧಿ ಆಯುಕ್ತರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಪರಿಸರ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಇತರ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.







