ಲೋಕಸಭೆಯಲ್ಲಿ ಪರಿಷ್ಕೃತ ಒಬಿಸಿ ಮಸೂದೆ ಮಂಡನೆ

ಹೊಸದಿಲ್ಲಿ,ಜ.3: ಕಳೆದ ಅಧಿವೇಶನದಲ್ಲಿ ರಾಜ್ಯಸಭೆಯು ಸೂಚಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸಿರುವ ನಿರ್ಣಾಯಕ ‘ಇತರ ಹಿಂದುಳಿದ ವರ್ಗಗಳ(ಒಬಿಸಿ) ಮಸೂದೆ’ಯನ್ನು ಸರಕಾರವು ಬುಧವಾರ ಲೋಕಸಭೆಯಲ್ಲಿ ಮಂಡಿಸಿತು. ಇದೇ ವೇಳೆ, ಈ ಮಸೂದೆಯು ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಸರಕಾರದ ಬದ್ಧತೆಯನ್ನು ಸೂಚಿಸುತ್ತಿದೆ ಎಂದು ಆಡಳಿತ ಬಿಜೆಪಿಯು ಹೇಳಿತು.
ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ಪ್ರಸ್ತಾಪಿಸಿರುವ ಮಸೂದೆಯು ಕಳೆದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಪ್ರತಿಪಕ್ಷವು ತಿದ್ದುಪಡಿಗಳನ್ನು ಅಂಗೀಕರಿಸುವ ಮುನ್ನ ಲೋಕಸಭೆಯು ಅಂಗೀಕರಿಸಿದ್ದ ತನ್ನ ಮೂಲ ಆವೃತ್ತಿಯಲ್ಲಿದ್ದ ಹೆಚ್ಚಿನ ಉಲ್ಲೇಖ ಗಳನ್ನೇ ಒಳಗೊಂಡಿದೆ.
ಆದರೆ ಕೇಂದ್ರ ಸಚಿವ ಗಿರಿರಾಜ ಸಿಂಂಗ್ ಮತ್ತು ಟಿಎಂಸಿ ಸದಸ್ಯ ಕಲ್ಯಾಣ ಬ್ಯಾನರ್ಜಿ ಅವರ ನಡುವಿನ ವಾಗ್ಯುದ್ಧದಿಂದಾಗಿ ಸಂವಿಧಾನ(123ನೇ ತಿದ್ದುಪಡಿ) ಮಸೂದೆ 2017ರ ಮೇಲಿನ ಚರ್ಚೆ ಅವಸರದ ಅಂತ್ಯ ಕಾಣುವಂತಾಯಿತು. ಕೋಲಾಹಲದಿಂದಾಗಿ ಸ್ಪೀಕರ್ ಸದನವನ್ನು ಗುರುವಾರದವರೆಗೆ ಮುಂದೂಡಿದರು.
ಇದಕ್ಕೂ ಮುನ್ನ ಮಸೂದೆಯನ್ನು ಮಂಡಿಸಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಥಾವರಚಂದ್ ಗೆಹ್ಲೋಟ್ ಅವರು, ಮೂಲ ಮಸೂದೆಯಲ್ಲಿ ರಾಜ್ಯಸಭೆಯು ಸೇರಿಸಿದ್ದ ತಿದ್ದುಪಡಿಗಳನ್ನು ತಿರಸ್ಕರಿಸಲು ಈ ಮಸೂದೆಯು ಬಯಸಿದೆ ಎಂದು ತಿಳಿಸಿದರು.
ಉದ್ದೇಶಿತ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು ಸಂಬಂಧಿಸಿದ ರಾಜ್ಯ ಸರಕಾರಕ್ಕೆ ವರದಿಯನ್ನು ನೀಡುತ್ತದೆ ಮತ್ತು ಮಳೆಗಾಲದ ಅಧಿವೇಶನದಲ್ಲಿ ಲೋಕಸಭೆಯು ಅಂಗೀಕರಿಸಿದ್ದ ಮೂಲ ಮಸೂದೆಯಲ್ಲಿ ಹೇಳಿದ್ದಂತೆ ರಾಜ್ಯಪಾಲರಿಗೆ ಸಲ್ಲಿಸುವುದಿಲ್ಲ ಎಂದೂ ಪರಿಷ್ಕೃತ ಮಸೂದೆಯಲ್ಲಿ ಹೇಳಲಾಗಿದೆ.
ಕಾಯ್ದೆಯು ಆಯೋಗದಲ್ಲಿ ಓರ್ವ ಮಹಿಳೆ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಓರ್ವ ಸದಸ್ಯರಿಗೆ ಸ್ಥಾನ ಕಲ್ಪಿಸಬೇಕು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿದ್ದವು ಎಂದು ಗೆಹ್ಲೋಟ್ ತಿಳಿಸಿದರು.
ಆಯೋಗದಲ್ಲಿ ಮಹಿಳೆಗೆ ಸ್ಥಾನ ಕಲ್ಪಿಸಲು ನಿಯಮಗಳನ್ನು ಪರಿಷ್ಕರಿಸಲು ತಾನು ಒಪ್ಪಿರುವುದಾಗಿ ಹೇಳಿದ ಗೆಹ್ಲೋಟ್, ಆದರೆ ಈಗಾಗಲೇ ಅಲ್ಪಸಂಖ್ಯಾತರ ಆಯೋಗವು ಅಸ್ತಿತ್ವದಲ್ಲಿರುವುದರಿಂದ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಜನಸಂಖ್ಯೆಯ ಶೇ.52ಕ್ಕೂ ಅಧಿಕವಿರುವ ಒಬಿಸಿಗಳಿಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಪ್ರತ್ಯೇಕ ಸಚಿವಾಲಯ ಬೇಕು ಎಂದು ಹೇಳಿದ ರಾಜೀವ ಸತವ್(ಕಾಂ) ಅವರು, ಆಯೋಗವು ಹೆಚ್ಚು ಪ್ರಾತಿನಿಧಿಕವಾಗಿರಲು ಅದರಲ್ಲಿ ಐದಕ್ಕೂ ಹೆಚ್ಚು ಸದಸ್ಯರಿರಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷಗಳ ಸಲಹೆಗಳನ್ನು ಸರಕಾರವು ಅಳವಡಿಸಿಕೊಳ್ಳಬೇಕು ಎಂದರು.