ದತ್ತ ಜಯಂತಿ ದಿನ ಅಹಿತಕರ ಘಟನೆ: ಎಲ್ಲ ಆರೋಪಿಗಳ ಬಂಧನ

ಚಿಕ್ಕಮಗಳೂರು, ಜ.3: ಕಳೆದ ತಿಂಗಳು ದತ್ತಜಯಂತಿ ಸಮಯದಲ್ಲಿ ನಡೆದ ಅಹಿತಕರ ಘಟನೆಗಳ ಕುರಿತು ದಾಖಲಾಗಿದ್ದ ವಿವಿಧ ಪ್ರಕರಣಗಳ ಎಲ್ಲಾ ಆರೋಪಿಗಳನ್ನು ಬಂಧಸಲಾಗಿದೆ ಎಂದು ಎಸ್ಪಿ ಕೆ.ಅಣ್ಣಾಮಲೈ ತಿಳಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.3ರಂದು ದತ್ತಜಯಂತಿಯ ಅಂತಿಮ ದಿನ ಶ್ರೀಗುರು ದತ್ತಾತ್ರೇಯ ಬಾಬಾಬುಡಾನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾಧಾರಿಗಳು ಗೋರಿಗಳನ್ನು ನಾಶ ಮಾಡಲು ಪ್ರಯತ್ನ ಮಾಡಿರುವ ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆಲ್ದೂರಿನ ಶಿವರಾಜ ಅಲಿಯಾಸ್ ಚಿನ್ನಿ(23), ಹೊಸಳ್ಳಿಯ ಎಚ್.ಎನ್.ಸಂದೇಶ, ಕೆಂಪನಹಳ್ಳಿಯ ಸುಮಂತ್(20), ಆಲ್ದೂರು ನಾಗ ಅಲಿಯಾಸ್ ನಾಗೇಂದ್ರ ಪೂಜಾರಿ(23), ಮಾಗೋಡು ಗ್ರಾಮದ ಮೋಹನ(26), ಹೈದಳ್ಳಿಯ ಜಿ.ಎನ್.ಅಶೋಕ(31), ತೇಜು ಅಲಿಯಾಸ್ ತೇಜಸ್ಸು(23), ಐ.ಪಿ.ಶ್ರೀನಾಥ(26 ವರ್ಷ) ಮತ್ತು ಬಜರಂಗದಳದ ಸಂಚಾಲಕ ತುಡುಕೂರು ಟಿ.ಎಲ್.ಮಂಜುನಾಥ(32) ಬಂಧಿತ ಆರೋಪಿಗಳಾಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.3 ನಗರದ ತಮಿಳು ಕಾಲನಿಯ ವಾಜೀದ್‌ಖಾನ್ ಎಂಬವರು ಬಾಬಾಬುಡನ್‌ಗಿರಿ ಸಮೀಪ ಗಾಳಿಕೆರೆಯ ಶ್ರೀಕೆಂಚರಾಯ ದೇವಸ್ಥಾನದ ಅರ್ಚಕರನ್ನು ಆಟೋದಲ್ಲಿ ಕರೆತರಲು ಹೋಗುತ್ತಿದ್ದಾಗ ಹೊನ್ನಮ್ಮನಹಳ್ಳದ ಹತ್ತಿರ ದತ್ತಮಾಲಧಾರಿಗಳು ಆಟೋವನ್ನು ನಿಲ್ಲಿಸಿ ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ ಕುರಿತು ದಾಖಲಾಗಿರುವ ಪ್ರಕರಣದಲ್ಲಿ 9 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆ.ವೈ. ಚಂದ್ರಶೇಖರ, ತುಮಕೂರಿನ ಕಡಬ ಎಂಬಲ್ಲಿನ ಚಂದ್ರಶೇಖರ, ಚಿಕ್ಕಮಗಳೂರಿನ ಶೃಂಗಾರ್ ಸ್ಟೋರ್‌ನ ಶಶಾಂಕ್(21), ಇಂದಾವರ ಗ್ರಾಮದ ಎಚ್.ಸುಪ್ರೀತ್(22) ಮಲ್ಲಂದೂರಿನ ಎನ್.ಎಂ.ಮಧು(23), ಗುಬ್ಬಿ ತಾಲೂಕಿನ ಉದ್ದೇಹೊಸಕೆರೆ ಗ್ರಾಮದ ಜಯಾನಂದ ಸ್ವಾಮಿ, ಕಡಬದ ಚನ್ನಬಸವನಯ್ಯ, ಚಿಕ್ಕಮಗಳೂರು ಬಳಿಯ ಲಕ್ಷ್ಮೀಶನಗರದ ರಾಜೇಂದ್ರ ಮತ್ತು ತುಮಕೂರಿನ ಕ್ಯಾತಸಂದ್ರದ ಕಾರ್ತಿಕ್‌ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.3ರಂದು ಉಪ್ಪಳ್ಳಿ ಬಡಾವಣೆಯ ಪ್ರವೀಣ(19) ಎಂಬವರು ದತ್ತಜಯಂತಿಗೆ ತೆರಳಿ ಹಿಂತಿರುಗುತ್ತಿದ್ದಾಗ ಉಪ್ಪಳ್ಳಿ ಸರ್ಕಲ್ ಬಳಿ ಹಲ್ಲೆ ನಡೆಸಿ, ಬೈಕ್ ಜಖಂಗೊಳಿಸಿದ ಕುರಿತು ದಾಖಲಾಗಿರುವ ಪ್ರಕರಣದಲ್ಲಿ ಹಿರೇಕೊಳಲೆ ಗ್ರಾಮದ ಸಮೀರ್(24), ಖಲಂದರ್(24) ಮತ್ತು ಕಲ್ಲುದೊಡ್ಡಿಯ ಅಕ್ಬರ್(32) ರನ್ನು ಬಂಧಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.3ರಂದು ಅಣ್ಣಪ್ಪ ಎಂಬವರು ಕತ್ರಿಮಾರಮ್ಮ ದೇವಸ್ಥಾನದಿಂದ ಹಿಂತಿರುಗುತ್ತಿರುವಾಗ ಸಂತೆ ಮೈದಾನದ ಲಾರಿ ಸ್ಟಾಂಡ್ ಬಳಿ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ
ತಮಿಳು ಕಾಲನಿಯ ಅವೇಝ್ ಅಹ್ಮದ್(24) ಶರೀಫ್‌ಗಲ್ಲಿಯ ಸೊಹೆಬ್ ಅಲಿ(27), ಮುನಿಯಮ್ಮನ ಬೀದಿಯ ಅಬ್ದುಲ್ ಖಾದರ್(29), ಮುಹಮ್ಮದ್ ಆರೀಫ್(19), ಹಫ್ಫ್(20), ಇಮ್ರಾನ್(22), ಮಸೀದಿ ಬೀದಿಯ ಸಫಾನ್‌ಶೇಖ್(19) ಮುಹಮ್ಮದ್ ಇಸ್ಮಾಯಿಲ್(19) ಬಂದಿತ ಆರೋಪಿಗಳು.







