ಸತ್ಯ ಹೇಳಿದ್ದಕ್ಕಾಗಿ ನನ್ನನ್ನು ಹುತಾತ್ಮಗೊಳಿಸಲಾಗಿದೆ
ಕೇಜ್ರಿವಾಲ್ ವಿರುದ್ಧ ಹರಿಹಾಯ್ದ ಕುಮಾರ್ ವಿಶ್ವಾಸ್

ಹೊಸದಿಲ್ಲಿ, ಜ.3: ಆಮ್ ಆದ್ಮಿ ಪಕ್ಷವು ಸಂಜಯ್ ಸಿಂಗ್, ಸುಶೀಲ್ ಗುಪ್ತಾ ಮತ್ತು ಎನ್.ಡಿ ಗುಪ್ತಾ ಅವರನ್ನು ಪಕ್ಷದ ರಾಜ್ಯಸಭಾ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿದೆ. ಈ ಬೆಳವಣಿಗೆಯಿಂದ ತೀವ್ರ ಅಸಮಾಧಾನಗೊಂಡಿರುವ ಕುಮಾರ್ ವಿಶ್ವಾಸ್ ದಿಲ್ಲಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷದ ಸ್ಥಾಪನೆಯ ಸಮಯದಲ್ಲೇ ಪಕ್ಷ ಸೇರಿದ್ದರೆ ಸುಶೀಲ್ ಗುಪ್ತಾ ದಿಲ್ಲಿ ಮೂಲದ ಉದ್ಯೋಗಪತಿಯಾಗಿದ್ದಾರೆ ಮತ್ತು ಎನ್.ಡಿ ಗುಪ್ತಾ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಅಭ್ಯರ್ಥಿಗಳ ಆಯ್ಕೆಯ ಬಳಿಕ ಸಭೆ ಸೇರಿದ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಸಿಎ) ಈ ಹೆಸರುಗಳನ್ನು ಅಂತಿಮಗೊಳಿಸಿತು. ಸುಶೀಲ್ ಗುಪ್ತಾ ಹರ್ಯಾಣದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಹುದೊಡ್ಡ ಕಾಣಿಕೆಯನ್ನು ನೀಡಿದ್ದಾರೆ. ಅವರು 15,000 ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುತ್ತಿದ್ದಾರೆ. ನಾರಾಯಣ ದಾಸ್ ಗುಪ್ತಾ ಐಸಿಎಐ (ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ) ಯ ಮಾಜಿ ಅಧ್ಯಕ್ಷರಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಈ ನಿರ್ಧಾರದಿಂದ ಅಸಮಾಧಾನಗೊಂಡಿರುವ ಕುಮಾರ್ ವಿಶ್ವಾಸ್ ಪಿಸಿಎಯ ಸದಸ್ಯರಾಗಿದ್ದರೂ ಸಭೆಗೆ ಹಾಜರಾಗಲಿಲ್ಲ. ನಂತರ ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಈ ಹಿಂದೆ ಕೇಜ್ರಿವಾಲ್ ಅವರು ನಿಮ್ಮನ್ನು ನಾನು ಕೊಲ್ಲುವುದಿಲ್ಲ, ಹುತಾತ್ಮಗೊಳಿಸುತ್ತೇನೆ ಎಂದು ಹೇಳಿದ್ದರು. ಈಗ ಆ ಮಾತು ನೆನಪಾಗುತ್ತದೆ. ಇಂದು ನಾನು ಹುತಾತ್ಮನಾಗಿದ್ದೇನೆ. ಸತ್ಯವನ್ನು ಹೇಳಿದ್ದಕ್ಕಾಗಿ ನನ್ನನ್ನು ಹುತಾತ್ಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ದಿಲ್ಲಿಯ ಮೂರು ರಾಜ್ಯಸಭಾ ಸ್ಥಾನಗಳಿಗೆ ಜನವರಿ 16ರಂದು ಚುನಾವಣೆ ನಡೆಯಲಿದೆ. ದಿಲ್ಲಿ ವಿಧಾನಸಭೆಯಲ್ಲಿ ಆಪ್ 70 ಸದಸ್ಯ ಬಲ ಹೊಂದಿದ್ದು ಎಲ್ಲ ಮೂರು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.