ಬೆಂಗಳೂರು: ದಲಿತರ ಮೇಲೆ ಹಲ್ಲೆ ಖಂಡಿಸಿ ದಸಂಸ ಪ್ರತಿಭಟನೆ

ಬೆಂಗಳೂರು, ಜ.3: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆಯ ವಿಜಯೋತ್ಸವ ದಿನಕ್ಕೆ ಸಂಘಪರಿವಾರ ಅಡ್ಡಿಪಡಿಸಿ ದಲಿತರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಸಮಾನ ಮನಸ್ಕರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಪುರಭವನದ ಎದುರು ದಲಿತ ಸಂರಕ್ಷಣಾ ಸಮಿತಿ ಕರ್ನಾಟಕ ನೇತೃತ್ವದಲ್ಲಿ ಸಮಾನ ಮನಸ್ಕರು, ವಿವಿಧ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಗಲಭೆಯಲ್ಲಿ 28 ವರ್ಷ ವಯಸ್ಸಿನ ರಾಹುಲ್ ಫತಂಗಲೆ ಎಂಬಾತ ಮೃತಪಟ್ಟಿದ್ದು, ಇದಕ್ಕೆಲ್ಲಾ ಸಂಘಪರಿವಾರವೇ ಕಾರಣ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೈಕೋರ್ಟ್ ವಕೀಲ, ಹೋರಾಟಗಾರ ಅನಂತ್‌ನಾಯ್ಕ, ಇನ್ನೂರು ವರ್ಷಗಳಿಂದ ಕೋರೆಗಾಂವ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬೌದ್ಧ ಅನುಯಾಯಿಗಳು ವಿಜಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಇದನ್ನು ಸಹಿಸದ ಸಂಘಪರಿವಾರ, ಬಜರಂಗ ದಳದ ಕಾರ್ಯಕರ್ತರು, ದಲಿತರ ಮೇಲೆ ನಡೆಸಿರುವ ದಾಳಿಯಲ್ಲಿ ಓರ್ವರು ಮೃತಪಟ್ಟಿದ್ದಾನೆ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹಾಗೂ ಮೋದಿ ಸರಕಾರ ಮಧ್ಯಪ್ರವೇಶಿಸಿ ಕೃತ್ಯದಲ್ಲಿ ಭಾಗಿಯಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ, ಪ್ರತಿಭಟನೆ ತೀವ್ರಗೊಳಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಬಾಲಕೃಷ್ಣ ಮಾತನಾಡಿ, ಕೇಂದ್ರ ಮತ್ತು ಮಹಾರಾಷ್ಟ್ರ ಸರಕಾರ ದಲಿತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ದಲಿತರ ಹತ್ಯೆ ನಡೆಯುತ್ತಿದೆ. ಇನ್ನೂ ಸಂಘಪರಿವಾರದ ಹಲ್ಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೈ.ಮರಿಸ್ವಾಮಿ, ಪ್ರೊ.ಚಂದ್ರಕಾಂತ್, ಕರ್ನಾಟಕ ತಂಡಾ ರಕ್ಷಣಾ ವೇದಿಕೆ ರಾಜ್ಯ ಮಹಿಳಾ ಕಾರ್ಯದರ್ಶಿ ರಾಧಾ ಸಿ., ರಾಜ್‌ಗೋಪಾಲ್ ಸೇರಿ ಪ್ರಮುಖರಿದ್ದರು.







