ಅಲೆಮಾರಿ, ಅರೆಅಲೆಮಾರಿಗಳ ಮುಖಂಡರೊಂದಿಗೆ ಸಿಎಂ ಭೇಟಿ: ಸಿ.ಎಸ್.ಶಿವಳ್ಳಿ
ಧಾರವಾಡ, ಜ.3: ರಾಜ್ಯ ಸರಕಾರವು ಅಲೆಮಾರಿ ಹಾಗೂ ಅರೆಅಲೆಮಾರಿಗಳ ಹಿತ ರಕ್ಷಣೆಗಾಗಿ ಶ್ರಮಿಸುತ್ತಿದ್ದು, ಮುಂದಿನ ಬಜೆಟ್ ಮಂಡನೆಗೆ ಮುನ್ನ ಜಿಲ್ಲೆಯ ಈ ಸಮುದಾಯಗಳ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಅಹವಾಲುಗಳ ಈಡೇರಿಕೆಗೆ ಮನವಿ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಸಿ.ಎಸ್.ಶಿವಳ್ಳಿ ಹೇಳಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2017-18 ನೇ ಸಾಲಿನಲ್ಲಿ ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ವಿವಿಧ ಕಾರ್ಯಕ್ರಮಗಳಡಿ ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಅಲೆಮಾರಿ, ಅರೆಅಲೆಮಾರಿ ಜನಾಂಗಗಳ ಪಟ್ಟಿಯಲ್ಲಿರುವ ಎಲ್ಲ 49 ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಯ ಗಮನಕ್ಕೆ ತಂದರೆ ಅವುಗಳಿಗೆ ಪರಿಹಾರ ಸಿಗಲಿದೆ. ಮುಖಂಡರು ತಮ್ಮ ನ್ಯಾಯಯುತ ಮನವಿಗಳನ್ನು ಸಿದ್ಧಪಡಿಸಿಕೊಂಡು ಬನ್ನಿ ಮುಖ್ಯಮಂತ್ರಿಗಳ ಭೇಟಿಗೆ ದಿನ ನಿಗದಿಪಡಿಸಲು ಕೋರೋಣ ಎಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರರು ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಬಾರದು. ಸ್ಥಳೀಯ ಮಟ್ಟದಲ್ಲಿ ವಿಚಾರಣೆ ನಡೆಸಿ ಕೂಡಲೆ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿರುವ ಈ ಸಮುದಾಯಗಳಲ್ಲಿನ ವಸತಿ ರಹಿತರ ಪಟ್ಟಿ ಸಿದ್ಧಪಡಿಸಿ. ಜಿ+1 ಅಥವಾ ಜಿ+2 ಮಾದರಿಯ ಮನೆಗಳನ್ನು ನಿರ್ಮಿಸಿಕೊಡಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ತಹಸೀಲ್ದಾರರು ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಅಲೆಮಾರಿ ಜನಾಂಗದವರ ಪ್ರಗತಿಯ ಸಲಹಾ ಸಮಿತಿ ಸಭೆಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದರು.
ಧಾರವಾಡದ ಡಾ.ಮಲ್ಲಿಕಾರ್ಜುನ ಮನಸೂರ ಕಲಾಭವನ ಹಾಗೂ ನವಲಗುಂದದ ಗುಡ್ಡದಕೇರಿಯಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯದವರಿಗಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಬೊಮ್ಮನಹಳ್ಳಿ ಹೇಳಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಆರ್.ಮಾತನಾಡಿ, ಅಲೆಮಾರಿ, ಅರೆಅಲೆಮಾರಿ ಸಮುದಾಯಗಳ ಕಾಲನಿಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಮಗಾರಿಗಳು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು. ನಗರ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಆಯ್ಕೆ ಮಾಡುವಾಗ ಅಲ್ಲಿನ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತ್ ಗಳನ್ನು ಸಂಪರ್ಕಿಸಬೇಕು ಎಂದರು.
ಸಭೆಯಲ್ಲಿ ಗೋಂಧಳಿ, ಗೊಲ್ಲ, ಶಿಕ್ಕಲಗಾರ್, ಜೋಗಿ, ದರ್ವೆಶ್ ಸೇರಿದಂತೆ ವಿವಿಧ ಅಲೆಮಾರಿ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪುರುಷೋತ್ತಮ ಸ್ವಾಗತಿಸಿ, ವಂಧಿಸಿದರು.







