ಉತ್ತರ ಪ್ರದೇಶದಲ್ಲಿ ಸರಕಾರದ ಮಾನ್ಯತೆ ಕಳೆದುಕೊಳ್ಳುವ ಭೀತಿಯಲ್ಲಿ 2,300 ಮದ್ರಸಗಳು

ಸಾಂದರ್ಭಿಕ ಚಿತ್ರ
ಲಕ್ನೊ, ಜ.3: ಉತ್ತರ ಪ್ರದೇಶದ ಮದ್ರಸ ಮಂಡಳಿಯ ಜಾಲತಾಣದಲ್ಲಿ ವಿವರಗಳನ್ನು ನೀಡದ ಹಿನ್ನೆಲೆಯಲ್ಲಿ 2,300 ಮದ್ರಸಗಳು ಸರಕಾರಿ ಮಾನ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಲಕ್ಷ್ಮಿ ನಾರಾಯಣ ಚೌದರಿ ಬುಧವಾರದಂದು ತಿಳಿಸಿದ್ದಾರೆ. ತಮ್ಮ ವಿವರಗಳನ್ನು ಪ್ರಕಟಿಸದ ಮದರಸಗಳನ್ನು ‘ನಕಲಿ’ ಎಂದು ಘೋಷಿಸುವ ಪ್ರಸ್ತಾಪವನ್ನು ಸರಕಾರವು ಪರಿಗಣಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ರಾಜ್ಯ ಮದ್ರಸ ಮಂಡಳಿ ಗುರುತಿಸಿರುವ 19,108 ಮದ್ರಸಗಳಿದ್ದು ಈ ಪೈಕಿ 16,808 ಮದ್ರಸಗಳು ತಮ್ಮ ವಿವರವನ್ನು ಜಾಲತಾಣದಲ್ಲಿ ಪ್ರಕಟಿಸಿವೆ. ಆದರೆ 2,300 ಮದ್ರಸಗಳು ಇನ್ನು ಕೂಡಾ ತಮ್ಮ ವಿವರಗಳನ್ನು ಪ್ರಕಟಿಸಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
“ಹಾಗಾದರೆ ಈ ಮದರಸಗಳು ಎಲ್ಲಿವೆ?, ನಾವು ಅವುಗಳನ್ನು ನಕಲಿ ಎಂದು ಪರಿಗಣಿಸಲಿದ್ದೇವೆ. ಇವುಗಳ ವಿರುದ್ಧ ಜನವರಿ ಅಂತಿಮ ವಾರದಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ” ಎಂದು ಅವರು ತಿಳಿಸಿದ್ದಾರೆ. ಸರಕಾರ ಮಾನ್ಯತೆ ಪಡೆದಿರುವ ಮದ್ರಸಗಳು ಜಾಲತಾಣದಲ್ಲಿ ತಮ್ಮ ವಿವರವನ್ನು ಪ್ರಕಟಿಸದಿದ್ದು, ಯಾವುದೇ ಸಮಸ್ಯೆ ಎದುರಾದರೆ ಸರಕಾರದ ಸಹಾಯವನ್ನು ಕೋರಬಹುದು. ಅವರಿಗೆ ಯಾವುದಾದರೂ ಸಮಸ್ಯೆಯಿದ್ದರೆ ಅದನ್ನು ಪರಿಹರಿಸಲು ನಾವು ನೆರವಾಗುತ್ತೇವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ನೋಂದಾಯಿತ ಮದ್ರಸಗಳ ಯಾವುದೇ ವಿದ್ಯಾರ್ಥಿ ಕೂಡಾ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುವುದಿಲ್ಲ ಎಂದು ಇದೇ ವೇಳೆ ಸಚಿವರು ಭರವಸೆ ನೀಡಿದರು. ಸರಕಾರದ ಜಾಲತಾಣದಲ್ಲಿ ತಮ್ಮ ವಿವರವನ್ನು ಪ್ರಕಟಿಸಲು ನಿಗದಿಯಾಗಿದ್ದ ಕೊನೆ ದಿನಾಂಕವನ್ನು ನಾವು ಹಲವು ಬಾರಿ ಬದಲಾಯಿಸಿದ್ದೇವೆ. ಮೊದಲಿಗೆ ಜುಲೈ 15, 2017, ನಂತರ ಜುಲೈ 30, 2017 ಹಾಗೂ ಕೊನೆಯಲ್ಲಿ ಆಗಸ್ಟ್ 15, 2017ರಂದು ಅಂತಿಮ ದಿನವನ್ನು ನಿಗದಿಪಡಿಸಿದ್ದೆವು. ಆದರೆ ಆಶ್ಚರ್ಯವೆಂದರೆ, ಈ ಮದ್ರಸಗಳ ಯಾವುದೇ ವಿದ್ಯಾರ್ಥಿಯಾಗಲಿ, ಶಿಕ್ಷಕರು, ಮುಖ್ಯಶಿಕ್ಷಕರು ಅಥವಾ ವ್ಯವಸ್ಥಾಪಕರು ಯಾರು ಕೂಡಾ ನಮ್ಮ ಬಳಿಗೆ ಬಂದಿಲ್ಲ ಎಂದು ಅವರು ಹೇಳಿದರು..
ಸರಕಾರದ ಕ್ರಮವನ್ನು ಖಂಡಿಸಿರುವ ವಿಪಕ್ಷಗಳನ್ನು ತರಾಟೆಗೆ ತೆಗದುಕೊಂಡ ಚೌಧರಿ, ಸರಕಾರದ ಉದ್ದೇಶ ಮದ್ರಸಗಳಲ್ಲಿ ಸರಿಯಾದ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವುದೇ ಆಗಿದೆ ಎಂದು ಹೇಳಿದ್ದಾರೆ. ಮದ್ರಸ ಶಿಕ್ಷಕರ ಶೋಷಣೆಯನ್ನು ತಡೆಯುವುದು ಮತ್ತು ವಿದ್ಯಾರ್ಥಿವೇತನವು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವರ್ಗಾವಣೆಯಾಗುವಂತೆ ಮಾಡುವುದು ಈ ಕ್ರಮದ ಹಿಂದಿರುವ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.