ಜ. 19ರಿಂದ ಕಟ್ಟೇ ವೀರ ಸ್ಪೋರ್ಟ್ಸ್ ಕ್ಲಬ್ ನಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ
ಭಟ್ಕಳ, ಜ. 3: ಇಲ್ಲಿನ ಕಟ್ಟೇವೀರ ಸ್ಪೋರ್ಟ್ಸ್ ಕ್ಲಬ್ ನಿಂದ ಜ.19 ರಿಂದ 21ರವರೆಗೆ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಸಾಗರ ರಸ್ತೆಯ ಗುರುಸುಧೀಂದ್ರ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಶ್ರೀಧರ್ ನಾಯ್ಕ ತಿಳಿಸಿದರು.
ಅವರುಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ರಾಜ್ಯಮಟ್ಟದ ಪಂದ್ಯಾವಳಿಯ ಮಾಹಿತಿ ನೀಡಿದರು.
ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರರ ರಾಜ್ಯದ ೧೬ ಆಹ್ವಾನಿತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು ಪ್ರಥಮ ಬಹುಮಾನವಾಗಿ 1 ಲಕ್ಷ ರೂ ನಗದು ಹಾಗೂ ಪಾರಿತೋಷಕವನ್ನು ನೀಡಲಾಗುತ್ತಿದೆ. ದ್ವಿತೀಯ ಬಹುಮಾನ 50 ಸಾವಿರ, ತೃತೀಯ 25 ಸಾವಿರ ರೂ ನಗದು ಹಾಗೂ ಪಾರಿತೋಷಕವನ್ನೊಳಗೊಂಡಿದೆ. ಅಲ್ಲದೆ ಉತ್ತಮ ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನಿಗದಿಪಡಿಸಲಾಗಿದೆ. ಈ ಪಂದ್ಯಾವಳಿಯನ್ನು ರಂಜನ್ ಗ್ಯಾಸ್ ಎಜೆನ್ಸಿಯ ಶಿವಾನಿ ಶಾಂತರಾಮ್ ಪ್ರಯೋಜಿಸಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಯೋಜಕಿ ಶಿವಾನಿ ಶಾಂತರಾಮ, ಭಟ್ಕಳದ ಮಲ್ಲಿಗೆ ಕಂಪು ರಾಷ್ಟ್ರಾಧ್ಯಂತ ಹರಡುವಂತಾಗಲು ಇಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ನಡೆಯಬೇಕು. ಭಟ್ಕಳದಲ್ಲಿ ಎಲ್ಲ ಧರ್ಮಿಯರು ಸೌಹಾರ್ಧಯುತವಾಗಿ ಜೀವಿಸುತ್ತಿದ್ದಾರೆ. ಕೆಲ ಕಹಿ ಅನುಭವಗಳನ್ನು ಮುಂದಿಟ್ಟುಕೊಂಡು ಭಟ್ಕಳದ ಹೆಸರನ್ನು ಹಾಳು ಮಾಡಲಾಗುತ್ತಿದೆ. ಆದರೆ ಇಲ್ಲಿಯ ಮಲ್ಲಿಗೆ ಕಂಪನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಂತಾಗಲು ನಾನು ಯಾವುದೇ ರೀತಿಯ ಸಹಕಾರಕ್ಕೂ ಸಿದ್ದ ಎಂದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ರಂಜನ್ ಎಜೆನ್ಸಿ ಇನ್ನೂ ಮುಂದೆಯೂ ಸಾಮಾಜಿಕ ಕಾರ್ಯವನ್ನು ಮಾಡುತ್ತದೆ ಎಂದರು.
ಕಬಡ್ಡಿ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಕೆ.ವಿ. ರಾಜೇಶ್, ರಾಮಕೃಷ್ಣ, ಇಹತೆಶಾಮ್ ಚಾಮುಂಡಿ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







