ಹಕ್ಕಿ ಜ್ವರದ ಮೂಲ ಪತ್ತೆಗೆ ಕ್ರಮ: ರಾಜ್‌ಕುಮಾರ್ ಖತ್ರಿ
ಬೆಂಗಳೂರು, ಜ.3: ಹಕ್ಕಿ ಜ್ವರ ಎಲ್ಲಿಂದ ಹರಡುತ್ತಿದೆ ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ. ಕೋಳಿ ಫಾರಂನಿಂದ ಹಕ್ಕಿ ಜ್ವರ ಹರಡಿರುವ ಸಾಧ್ಯತೆ ಇಲ್ಲ. ಅಂಗಡಿಗಳಿಂದಲೆ ಈ ಜ್ವರ ಹರಡಿರುವ ಸಂಶಯವಿದೆ ಎಂದು ಪಶುಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜ್‌ಕುಮಾರ್ ಖತ್ರಿ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಕ್ಕಿಜ್ವರದ ಮೂಲ ಪತ್ತೆ ಹಚ್ಚಲು ಬಿಬಿಎಂಪಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೆ ಆ ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಲಾಗಿದೆ ಎಂದರು.
ಡಿ.15ರ ನಂತರ ಕೋಳಿಗಳು ಸತ್ತಿದ್ದರೆ ಮಾಹಿತಿ ನೀಡಲು ಸಹಾಯವಾಣಿ 1800-425-0012 ಆರಂಭಿಸಲಾಗಿದೆ. ಕೋಳಿ ಮಾಂಸ ತಿನ್ನುವ ಮೊದಲು ಜಾಗೃತರಾಗಿರಬೇಕು. ಅರೆಬೆಂದ ಕೋಳಿ ಮಾಂಸ, ಮೊಟ್ಟೆಗಳನ್ನು ತಿನ್ನಬಾರದು ಎಂದು ಅವರು ಮನವಿ ಮಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಜಯ್ ಸೇಠ್ ಮಾತನಾಡಿ, ಬೆಂಗಳೂರು ನಗರದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ರಾಜ್ಯದ ಜನರು ಈ ಬಗ್ಗೆ ಭಯಭೀತರಾಗುವ ಅಗತ್ಯವಿಲ್ಲ ಎಂದರು.
ಸರಕಾರ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವೈದ್ಯರು, ನರ್ಸ್‌ಗಳಿಗೂ ಈ ಸಂಬಂಧ ಸೂಚನೆ ನೀಡಲಾಗಿದೆ. 10 ಕಿ.ಮೀ.ವ್ಯಾಪ್ತಿಯಲ್ಲಿ ಸರ್ವೇಕ್ಷಣೆಗಾಗಿ 100 ಮಂದಿ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರಿಂದಲೂ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.







