ಅಕ್ರಮ ಮರಳು ಸಾಗಣೆ ತಡೆಗೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಜ.3: ಚೆಕ್‌ಪೋಸ್ಟ್‌ಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಿದರೆ ಮಾತ್ರ ರಾಜ್ಯದಲ್ಲಿ ಅಕ್ರಮ ಮರಳು ಸಾಗಣೆ ದಂಧೆ ತಡೆಯಲು ಸಾಧ್ಯ ಎಂದು ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.
ಯಾದಗಿರಿಯಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹನುಮಂತ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಹೀಗೆ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸುನೀಲ್ ಕುಮಾರ್ ವಾದಿಸಿ, ಯಾದಗಿರಿ ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸುಮಾರು 900 ಪ್ರಕರಣಗಳು ದಾಖಲಾಗಿದ್ದು, 500ಕ್ಕೂ ಹೆಚ್ಚು ವಾಹನ ಜಪ್ತಿ ಮಾಡಲಾಗಿದೆ. ಹೀಗಿದ್ದರೂ ಮತ್ತೆ ಮರಳು ಲೂಟಿ ಮಾಡಲಾಗುತ್ತಿದ್ದು, ಸರಕಾರಿ ಅಧಿಕಾರಿಗಳು ಹಣ ಪಡೆದು ಮರಳು ತುಂಬಿದ ಲಾರಿಗಳನ್ನು ಚೆಕ್‌ಪೋಸ್ಟ್ ದಾಟಲು ಅವಕಾಶ ಕೊಡುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ರಾಜ್ಯದಲ್ಲಿ ಅಕ್ರಮ ಮರಳು ಸಾಗಣೆ ತಡೆಯಲು ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ? ಎಂದು ಸರಕಾರಿ ವಕೀಲರನ್ನು ಪ್ರಶ್ನಿಸಿತು. ಸರಕಾರಿ ವಕೀಲರು ಉತ್ತರಿಸಿ, ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರಕಾರ ಹಲವು ಕ್ರಮ ತೆಗೆದುಕೊಂಡಿದೆ. ಅಕ್ರಮ ಮರಳು ಗಣಿಗಾರಿಕೆಗೆ ಸಹಕರಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ವಿಚಾರಣೆಯನ್ನು ಜ.11ಕ್ಕೆ ನಿಗದಿಪಡಿಸಿದರೆ, ಅಂದು ಎಲ್ಲಾ ದಾಖಲೆಗಳೊಂದಿಗೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಕೋರಿದರು.
ಇದಕ್ಕೆ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ರಾಜ್ಯದಲ್ಲಿ ಏಕೆ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ? ಅದನ್ನು ತಡೆಯುವಂತಹ ಪ್ರಾಮಾಣಿಕ ಅಧಿಕಾರಿಗಳ ಕೊರತೆ ಸರಕಾರದಲ್ಲಿ ಇದೆಯೇ? ಯಾದಗಿರಿ ಜಿಲ್ಲೆಯೊಂದರಲ್ಲೇ 900 ಪ್ರಕರಣ ದಾಖಲಾಗಿ, 500 ವಾಹನ ಜಪ್ತಿ ಮಾಡಲಾಗಿದೆ ಎಂದರೆ ಏನರ್ಥ? ಚೆಕ್‌ಪೋಸ್ಟ್ ಹಾಗೂ ಮರಳು ಸಿಗುವ ಸ್ಥಳಗಳಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು. ಆಗ ಮಾತ್ರ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸಾಧ್ಯ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟರು.
ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಚಿನ್ನ ಸೇರಿದಂತೆ ಅಕ್ರಮವಾಗಿ ಸಾಗಿಸುವ ಎಲ್ಲ ವಸ್ತುಗಳನ್ನು ಪತ್ತೆ ಹೆಚ್ಚಲಾಗುತ್ತದೆ. ಆದರೆ, ರಸ್ತೆಯಲ್ಲಿ ಮಾತ್ರ ಏಕೆ ಪತ್ತೆ ಹಚ್ಚಲಾಗದು? ಚೆಕ್‌ಪೋಸ್ಟ್ ಇದ್ದು, ಅಗತ್ಯ ಸಿಬ್ಬಂದಿಯೂ ಇರುತ್ತಾರೆ. ಜಿಪಿಎಸ್ ಸಹ ಅಳವಡಿಸಲಾಗಿರುತ್ತದೆ. ಇಷ್ಟಾದರೂ ಅವ್ಯವಹಾರ ತಡೆಯಲಾಗುತ್ತಿಲ್ಲ. ಸರಕಾರವು ಭ್ರಷ್ಟ ಅಧಿಕಾರಿಗಳನ್ನು ನಿಯೋಜಿಸುತ್ತವೆ. ಅವರು ಅಕ್ರಮ ಮರಳು ಸಾಗಣೆದಾರರೊಂದಿಗೆ ಶಾಮೀಲಾಗುತ್ತಾರೆ. ಸರಕಾರಿ ಅಧಿಕಾರಿಗಳ ಸಹಕಾರವಿಲ್ಲದೆ ಈ ದಂಧೆ ನಡೆಯಲು ಸಾಧ್ಯವಿಲ್ಲ. ಇಲ್ಲವೆಂದರೆ 900 ಪ್ರಕರಣಗಳ ದಾಖಲಾಗಿ, 500 ವಾಹನಗಳನ್ನು ಹೇಗೆ ಜಪ್ತಿಯಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಪೀಠ, ತಪ್ಪಿತಸ್ಥ ಅಧಿಕಾರಿಗಳನ್ನು ಗುರುತಿಸಿ ಕಠಿಣ ಕ್ರಮ ಜರುಗಿಸುವಂತೆ ಸರಕಾರಕ್ಕೆ ತಾಕೀತು ಮಾಡಿತು.
ನಂತರ ಅಕ್ರಮ ಮರಗಳು ಗಣಿಗಾರಿಕೆ ತಡೆಯಲು ಕೈಗೊಂಡಿರುವ ಕ್ರಮ ಹಾಗೂ ಅದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಜರುಗಿಸಿದ ಶಿಸ್ತುಕ್ರಮಗಳ ಬಗ್ಗೆ ಜ.11ರಂದು ಸಮಗ್ರ ವರದಿ ಸಲ್ಲಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.







