"ದೇವೇಂದ್ರ ಪಡ್ನವೀಸ್ ರಾಜೀನಾಮೆ ನೀಡಲಿ"
ಕೋರೆಗಾಂವ್ ಹಿಂಸಾಚಾರ ಖಂಡಿಸಿ ಪ್ರತಿಭಟನೆ

ಮಂಡ್ಯ, ಜ.3: ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಕೋರೆಗಾಂವ್ ಯುದ್ಧದ 200ನೆ ವರ್ಷಾಚರಣೆಯ ವೇಳೆ ಸಂಘಪರಿವಾರದ ದಾಂಧಲೆ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು, ಮೈಸೂರು ಹೆದ್ದಾರಿಯ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ಸಂಘಪರಿವಾರ ಮತ್ತು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭೀಮಾ ಕೋರೆಗಾಂವ್ ಯುದ್ಧದ ವರ್ಷಾಚರಣೆ ವೇಳೆ ಸಂಘಪರಿವಾರದವರು ಅಡ್ಡಿಪಡಿಸಿ ಹಿಂಸಾಚಾರಕ್ಕೆ ಕಾರಣವಾಗಿದ್ದಾರೆ. ಇದರಿಂದ ಅಮಾಯಕ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಅವರು ಕಿಡಿಕಾರಿದರು. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಅಸ್ತಿತ್ವಕ್ಕೆ ಬಂದ ನಂತರ, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ದೇಶದಲ್ಲಿ ಕೋಮುಶಕ್ತಿಗಳ ಪುಂಡಾಡಿಕೆ ಮಿತಿಮೀರುತ್ತಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಮತ್ತು ಬಿಜೆಪಿ ಸರಕಾರಗಳು ಮುಂದಾಗುತ್ತಿಲ್ಲ ಎಂದು ದೂರಿದರು. ಕೋರೆಗಾಂವ್ ವರ್ಷಾಚರಣೆ ವೇಳೆ ಹಿಂಸಾಚಾರ ಭುಗಿಲೇಳಲು ಮಹಾರಾಷ್ಟ್ರ ಸರಕಾರದ ಬೇಜವಾಬ್ಧಾರಿ ಕಾರಣವಾಗಿದ್ದು, ಕೂಡಲೇ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್ ರಾಜೀನಾಮೆ ನೀಡಬೇಕು, ಮೃತಪಟ್ಟವರಿಗೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ದೇಶದಲ್ಲಿ ಕೇಂದ್ರದ ಹಲವು ಮಂತ್ರಿಗಳು, ಬಿಜೆಪಿ ನಾಯಕರು ದೇಶದ ಒಕ್ಕೂಟ ವ್ಯವಸ್ಥೆಗೆ, ಜಾತ್ಯತೀತ ತತ್ವಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿದ್ದು, ಇಂತಹವರ ಬಾಯಿಗೆ ಬೀಗ ಹಾಕಲು ಪ್ರಧಾನಿ ಮುಂದಾಗದಿದ್ದರೆ, ದೇಶದ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು. ಬಿಎಸ್ಪಿ ಮುಖಂಡ ಎಂ.ಕೃಷ್ಣಮೂರ್ತಿ ಮಾತನಾಡಿ, ಬಿಜೆಪಿ ಆಡಳಿತ ನಡೆಸುವತ್ತಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರಕಾರದಿಂದ ದಲಿತರಿಗೆ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾನ್ಯತೆ ಇಲ್ಲದಾಗಿದೆ. ಇಂತಹ ಕೃತ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿಯುತವಾಗಿ ಕೋರೆಗಾಂವ್ ಯುದ್ಧದ ವರ್ಷಾಚರಣೆ ನಡೆಸುತ್ತಿದ್ದವರ ಮೇಲೆ ಕೋಮುವಾದಿ ಸಂಘಪರಿವಾರದವರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಹಾರಾಷ್ಟ್ರ ಸರಕಾರವನ್ನು ವಜಾಮಾಡಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಅವರು ರಾಷ್ಟ್ರಪತಿಗಳನ್ನು ಆಗ್ರಹಿಸಿದರು.
ದಸಂಸ ಮುಖಂಡರಾದ ಎಂ.ಬಿ.ಶ್ರೀನಿವಾಸ್, ಅಂದಾನಿ ಸೋಮನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಎಂ.ಬಿ.ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಷಣ್ಮುಖೇಗೌಡ, ಶಿವರಾಜ್, ದೀಪಕ್, ಧನಲಕ್ಷ್ಮಿ, ಗೀತಾ, ಪ್ರಗತಿಪರ ಸಂಘಟನೆಗಳ ಇತರ ಮುಖಂಡರು ಭಾಗವಹಿಸಿದ್ದರು.







