ಮಹದಾಯಿ ಹೋರಾಟಕ್ಕೆ ಕೈಜೋಡಿಸಲು ಮಾದೇಗೌಡರಿಗೆ ಮನವಿ

ಮಂಡ್ಯ, ಜ.3: ಮಹಾದಾಯಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಜಿ ಸಂಸದ ಹಾಗು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಅವರಿಗೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಮನವಿ ಮಾಡಿದ್ದಾರೆ. ಬುಧವಾರ ನಗರದ ಮಾದೇಗೌಡರ ನಿವಾಸಕ್ಕೆ ತೆರಳಿ ಮನವಿ ನೀಡಿದ ಅವರು, ಕಾವೇರಿ ಚಳವಳಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ನಿಮ್ಮಂತಹ ಹಿರಿಯರ ಮಾರ್ಗದರ್ಶನ ಮಹದಾಯಿ ಹೋರಾಟಕ್ಕೂ ಅಗತ್ಯವಿದೆ ಎಂದು ಕೋರಿದರು.
ಮಹದಾಯಿ ವಿಷಯದಲ್ಲಿ ಇಡೀ ಅಖಂಡ ಕರ್ನಾಟಕ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ನೀವು ಚಳವಳಿ ಸ್ಥಳಕ್ಕೆ ಬಂದು ಸ್ಫೂರ್ತಿ ತುಂಬಬೇಕು. ಹಾಗೆಯೇ ಕಾವೇರಿ ಕಣಿವೆ ಪ್ರದೇಶದಲ್ಲೂ ಹೋರಾಟವನ್ನು ರೂಪಿಸಬೇಕು ಎಂದು ಅವರು ಹೇಳಿದರು. ಕೇವಲ 7 ಟಿಎಂಸಿ ಕುಡಿಯುವ ನೀರು ನೀಡಲು ಗೋವಾ, ಮಹಾರಾಷ್ಟ್ರ ಸರಕಾರಗಳು ಒಪ್ಪದೆ ರಾಜಕಾರಣ ಮಾಡುತ್ತಿದ್ದರೆ, ಕರ್ನಾಟಕದ ರಾಜಕಾರಣಿಗಳೂ ಈ ವಿಷಯದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ರಾಜಕಾರಣಿಗಳನ್ನು ಬದಿಗಿಟ್ಟು ಹೋರಾಟ ನಡೆಸಬೇಕಾಗಿದ್ದು, ಹೋರಾಟದಲ್ಲಿ ಪ್ರಾಣ ತ್ಯಾಗಕ್ಕೂ ಸಿದ್ದರಿದ್ದೇವೆ. ಹೋರಾಟಕ್ಕೆ ಧುಮುಕಿ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಪಾಟೀಲ ಅವರು ಮಾದೇಗೌಡರಲ್ಲಿ ಮನವಿ ಮಾಡಿದರು. ನವನಿರ್ಮಾಣ ಸೇನೆ ಇತರೆ ಪದಾಧಿಕಾರಿಗಳು ಹಾಗು ಕನ್ನಡ ಸೇನೆ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಸ್.ಮಂಜುನಾಥ್ ಹಾಜರಿದ್ದರು.





