ಪ್ಲಾಸ್ಟಿಕ್ ಬಳಕೆ, ಮಾರಾಟಗಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ: ಹೈಕೋರ್ಟ್

ಬೆಂಗಳೂರು, ಜ.3: ಪರಿಸರ ಸಂರಕ್ಷಣೆಯ ಉದ್ದೇಶದಿಂದ ಎಲ್ಲ ಬಗೆಯ ಪ್ಲಾಸ್ಟಿಕ್ ಉತ್ಪಾದನೆ, ಪೂರೈಕೆ ಹಾಗೂ ಮಾರಾಟವನ್ನು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿರುವ ಆದೇಶ ಅನುಷ್ಠಾನಕ್ಕೆ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹೈಕೋರ್ಟ್ ಸೂಚಿಸಿದೆ.
ಪ್ಲಾಸ್ಟಿಕ್ ನಿಷೇಧಿಸಿ ಸರಕಾರ 2016ರ ಮಾ.11ರಂದು ಹೊರಡಿಸಿದ್ದ ಆದೇಶದ ಅನ್ವಯ ಬಿಬಿಎಂಪಿ ನೀಡಿದ್ದ ನೋಟಿಸ್ ಪ್ರಶ್ನಿಸಿ ಮೆಸರ್ಸ್ 360ಡಿಗ್ರಿ ಪ್ರಿಂಟ್ಸ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಪೀಠದಲ್ಲಿ, ವಿಚಾರಣೆ ವೇಳೆ ಖುದ್ದು ನ್ಯಾಯಾಲಯದಲ್ಲಿ ಹಾಜರಿದ್ದ ಬಿಬಿಎಂಪಿ ಜಂಟಿ ಆಯುಕ್ತ(ಕಂದಾಯ) ವೆಂಕಟಾಚಲಪತಿ ಅವರಿಗೆ ಈ ನಿರ್ದೇಶನ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಬಿಬಿಎಂಪಿ ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಅಹವಾಲು ಇದ್ದರೂ ಅರ್ಜಿದಾರರು ಅದನ್ನು ಪಾಲಿಕೆ ಅಧಿಕಾರಿಗಳ ಮುಂದೆ ಸಲ್ಲಿಸಬೇಕು. ಅಧಿಕಾರಿಗಳು ಅಹವಾಲು ಆಲಿಸಿ ಸೂಕ್ತ ನಿರ್ಧಾರಕ್ಕೆ ಬರಬೇಕು ಎಂದು ಸೂಚಿಸಿರುವ ನ್ಯಾಯಾಲಯ, ಅರ್ಜಿದಾರರ ಸಂಸ್ಥೆ ಕಾನೂನು ಪ್ರಕಾರ ವ್ಯಾಪಾರಿ ಲೈಸನ್ಸ್ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.





