ಮಂಜೂರಾಗಿದ್ದ ನಿವೇಶನ ಹಂಚಿಕೆ ರದ್ದು: ಬಿಡಿಎಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು, ಜ.3: ಮಂಜೂರಾಗಿದ್ದ ನಿವೇಶನ ಹಂಚಿಕೆಯನ್ನು ರದ್ದು ಮಾಡಿದ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ)ಕ್ರಮಕ್ಕೆ ಚಾಟಿ ಬೀಸಿರುವ ಹೈಕೋರ್ಟ್ ಬಿಡಿಎ ಉಪ ನಿರ್ದೇಶಕರಿಗೆ 25 ಸಾವಿರ ರೂ.ದಂಡ ವಿಧಿಸಿದೆ.
ನಗರದ ಭಾರತಿ ಲೇಔಟ್ ನಿವಾಸಿ ಮಂಜುನಾಥ ಶೆಟ್ಟಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.
ಪ್ರಕರಣವೇನು: ವಲಗೇರಹಳ್ಳಿ ಗ್ರಾಮದ ಸರ್ವೇ ನಂ.26/2ರಲ್ಲಿ ಜಮೀನು ವಶಪಡಿಸಿಕೊಂಡಿದ್ದ ಬಿಡಿಎ ಜಮೀನು ಮಾಲಕ ಗಿಡದ ಕೋನೇನಹಳ್ಳಿಯ ಎಂ.ಮುನಿಕೃಷ್ಣಪ್ಪಎಂಬವರಿಗೆ ಪರಿಹಾರ ರೂಪದಲ್ಲಿ ಎಚ್‌ಎಸ್‌ಆರ್ ಬಡಾವಣೆಯ ಮೂರನೇ ಹಂತದಲ್ಲಿ 222.95 ಚದರ ಅಡಿಯ ನಿವೇಶನ ನೀಡಿತ್ತು. 2013ರ ಜೂನ್ 7ರಂದು ಈ ನಿವೇಶನಕ್ಕೆ ಕ್ರಯಪತ್ರ ಮಂಜೂರಾಗಿತ್ತು.
ಮುನಿಕೃಷ್ಣಪ್ಪ ಈ ನಿವೇಶನವನ್ನು 2014ರ ಜನವರಿ 17ರಂದು ಮಂಜುನಾಥ ಶೆಟ್ಟಿ ಅವರಿಗೆ 1 ಕೋಟಿ 20 ಲಕ್ಷಕ್ಕೆ ಮಾರಾಟ ಮಾಡಿದ್ದರು.
ಇದರ ಮಧ್ಯೆ ಮುನಿಕೃಷ್ಣಪ್ಪ ವಲಗೇರಹಳ್ಳಿ ಜಮೀನಿನ ಹಕ್ಕುದಾರಿಕೆ ಸಮರ್ಥಿಸಿ ನೀಡಿರುವ ದಾಖಲೆಗಳು ನಕಲಿಯಾಗಿವೆ ಎಂದು ಆರೋಪಿಸಿ ಜಗನ್ನಾಥ್ ಎಂಬವರು ಬಿಡಿಎಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಬಿಡಿಎ ಮುನಿಕೃಷ್ಣಪ್ಪ ಅವರಿಗೆ ನೀಡಿದ್ದ ಬದಲಿ ನಿವೇಶನದ ಮೂಲ ಕ್ರಯಪತ್ರವನ್ನು 2015ರ ಫೆಬ್ರವರಿ 27ರಂದು ರದ್ದುಪಡಿಸಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಮಂಜುನಾಥ ಶೆಟ್ಟಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನೋಂದಣಿ ಕಾಯ್ದೆ ಕಲಂ 88 (1)ರ ಅಡಿಯಲ್ಲಿ ಖರೀದಿದಾರ ಅಥವಾ ಮಾರಾಟಗಾರರಿಗೆ ಮುಂಚಿತವಾಗಿ ಯಾವುದೇ ನೋಟಿಸ್ ನೀಡದೆ ಬಿಡಿಎ ಕೈಗೊಂಡಿರುವ ಕ್ರಮ ಕಾನೂನು ಬಾಹಿರವಾಗಿದೆ ಎಂದು ಆಕ್ಷೇಪಿಸಿದ್ದರು.
ಇದೀಗ ಪ್ರಕರಣದ ಕುರಿತಂತೆ ತೀರ್ಪು ನೀಡಿರುವ ನ್ಯಾಯಮೂರ್ತಿ ವೀರಪ್ಪ ಅವರು, ಮಂಜುನಾಥ ಶೆಟ್ಟಿ ಅವರಿಗೆ ನಿವೇಶನ ನೋಂದಣಿ ಮಾಡಿದ ಅಧಿಕಾರಿ ದಾಖಲೆಗಳ ಪೂರ್ವಾಪರ ಪರಿಶೀಲನೆಯಲ್ಲಿ ತಪ್ಪೆಸಗಿದ್ದಾರೆ. ಹೀಗಾಗಿ, ಸ್ಥಿರಾಸ್ತಿ ನೋಂದಣಿ ಮಾಡಿದ ಎಡಿಆರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಬೇಕು ಎಂದು ನಿರ್ದೇಶಿಸಿದ್ದಾರೆ.







