ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ: ಕೆ.ಜೆ.ಜಾರ್ಜ್ ಸೂಚನೆ

ಬೆಂಗಳೂರು, ಜ.3: ಜಯಮಹಲ್ ವಾಡ್-63ರಲ್ಲಿ ಇರುವ ಇಂದಿರಾ ಕ್ಯಾಂಟೀನ್ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬುಧವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳ ತಪಾಸಣೆ ವೇಳೆಯಲ್ಲಿ ಅಧಿಕಾರಿಗಳಿಗೆ ಅವರು ಈ ಸೂಚನೆ ನೀಡಿದರು. ಹಜರತ್ ಕಂಬಾಲ್ ಪೋಶ್ ರಸ್ತೆಯಲ್ಲಿ ತಪಾಸಣೆ ನಡೆಸಿದ ಸಚಿವರು ರಸ್ತೆಯಲ್ಲಿ ಹಲವು ಕಡೆ ಕಸನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಸಂಬಂದಪಟ್ಟ ಅಭಿಯಂತರರ ಮೇಲೆ ಶಿಸ್ತುಕ್ರಮ ಜರುಗಿಸಿ ದಿನನಿತ್ಯ ಕಸ ಸಾಗಿಸುವ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.
ಬಿಬಿಎಂಪಿ ವತಿಯಿಂದ ಹೈಟೆಕ್ ಆಸ್ಪತ್ರೆಯನ್ನು ನಾರಾಯಣ ಹೃದಯಾಲಯದ ಜೊತೆ ಸಹಭಾಗಿತ್ವದಲ್ಲಿ ನಿರ್ಮಿಸುತ್ತಿದ್ದು, ಈ ಆಸ್ಪತ್ರೆಯಿಂದ ಈ ವ್ಯಾಪ್ತಿಯ ಪ್ರದೇಶದ ಕಡುಬಡವರಿಗೆ ತುಂಬಾ ಅನುಕೂಲವಾಗಲಿದ್ದು, ಕಟ್ಟಡದ ಕಾರ್ಯ ಸಂಪೂರ್ಣಗೊಂಡಿದ್ದು, ಹೈಟೆಕ್ ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳು ಮತ್ತು ಇನ್ನಿತರೆ ವ್ಯವಸ್ಥೆಗಳನ್ನು ಶೀಘ್ರವಾಗಿ ತಲುಪಿಸುವಂತೆ ಆದೇಶಿಸಿ ಮುಂದಿನ ತಿಂಗಳ 15ರೊಳಗಾಗಿ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲು ಕ್ರಮವಹಿಸುವಂತೆ ಆದೇಶಿಸಿದರು.
ಜಸ್ಮಭವನ ರಸ್ತೆಯಲ್ಲಿ ಇಂದಿರಾ ಕ್ಯಾಂಟೀನ್ ಅಡುಗೆ ಮನೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಅವರು, ಸದರಿ ಅಡುಗೆ ಮನೆಯಿಂದ ಈಗಾಗಲೇ ಆಹಾರವು ಸರಬರಾಜಾಗುತ್ತಿದ್ದು, ಅದರ ಗುಣಮಟ್ಟವನ್ನು ಖದ್ದು ಅಹಾರವನ್ನು ಸೇವಿಸುವ ಮೂಲಕ ಪರಿಶೀಲಿಸಿದರು. ಕಸನಿರ್ವಹಣೆಗೆ ನೂತನವಾಗಿ ಆಟೋ ಟಿಪ್ಪರ್‌ಗಳ ಮುಖಾಂತರ ನೇರವಾಗಿ ಟ್ರಾನ್ಸ್ ಫರ್ ಸ್ಟೇಷನ್‌ಗಳನ್ನು ಅಳವಡಿಸಲು ಕ್ರಮ ವಹಿಸುತ್ತಿದ್ದು, ಇದರಿಂದ ಕಸದಲ್ಲಿರುವ ತೂಕದ ಪ್ರಮಾಣ ಕಡಿಮೆಯಾಗಿ ಮತ್ತು ಲಿಚೇಟ್ ಇಂಗಿ, ಕಸವನ್ನು ರಸ್ತೆಯಲ್ಲಿ ಸಾಗಿಸುವಾಗ ಯಾವುದೇ ರೀತಿಯಲ್ಲಿ ವಾಸನೆ ಅಥವಾ ರಸ್ತೆಯಲ್ಲಿ ಸೋರದೆ ರಸ್ತೆಯು ಸಹ ಅಧಿಕ ಬಾಳಿಕೆ ಬರಲಿದೆ ಎಂದರು.







