ಕನ್ಯಾನ: ವ್ಯಕ್ತಿಗೆ ಕಾರು ತಾಗಿದ ವಿಚಾರ: ತಂಡದಿಂದ ಹಲ್ಲೆ
.jpeg)
ಬಂಟ್ವಾಳ, ಜ. 3: ರಸ್ತೆ ಮಧ್ಯೆದಲ್ಲಿ ನಿಂತಿದ್ದ ವ್ಯಕ್ತಿಗೆ ಕಾರು ತಾಗಿದ ವಿಚಾರದಲ್ಲಿ ಯುವಕರ ಗುಂಪೊಂದು ಕಾರಿಗೆ ಹಾನಿ ಮಾಡಿ ಚಾಲಕನಿಗೆ ಹಾಗೂ ಸಹ ಪ್ರಯಾಣಿಕನಿಗೆ ಹಲ್ಲೆ ನಡೆಸಿದ ಘಟನೆ ಬುಧವಾರ ವಿಟ್ಲದ ಕನ್ಯಾನದಲ್ಲಿ ನಡೆದಿದೆ.
ವಿಟ್ಲದ ಪೆರುವಾಯಿ ನಿವಾಸಿಗಳಾದ ಚಾಲಕ ಜೋಸೆಫ್ ಹಾಗೂ ಪ್ರಯಾಣಿಕ ಹರೀಶ್ ಶೆಟ್ಟಿ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಕನ್ಯಾನ ಪೇಟೆಯ ರಸ್ತೆ ಮಧ್ಯೆದಲ್ಲಿ ಯುವಕರ ಗುಂಪೊಂದು ಸೇರಿದ್ದು, ಈ ಸಂದರ್ಭ ಬಂದ ಕಾರು ಯುವಕನಿಗೆ ತಾಗಿದೆ ಎಂದು ಆರೋಪಿಸಿ ತಂಡ ಕಾರನ್ನು ಅಡ್ಡ ಗಟ್ಟಿ ಚಾಲಕ ಜೋಸಪ್ ಹಾಗೂ ಪ್ರಯಾಣಿಕ ಹರೀಶ್ ಶೆಟ್ಟಿ ಅವರಿಗೆ ಹಿಗ್ಗಾಮುಗ್ಗ ಥಳಿಸಿ, ಬಳಿಕ ಕಾರಿಗೆ ಹಾನಿ ಮಾಡಿ ದಾಂಧಲೆ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಹಾನಿಗೊಂಡಿದೆ. ಗಾಯಾಳುಗಳು ವಿಟ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ 15ಕ್ಕಿಂತಲೂ ಅಧಿಕ ಮಂದಿಯ ವಿರುದ್ಧ ಪ್ರರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.





