ಮೈಸೂರು: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಮೃತ್ಯು
ಮೈಸೂರು,ಜ.3: ಕಿಡಿಗೇಡಿ ಯುವಕನ ಪುಂಡಾಟಕ್ಕೆ ಹೆದರಿ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪ್ತೆಯೋರ್ವಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ರಮ್ಮಹಳ್ಳಿ ನಿವಾಸಿ ರಜನಿ ಎಂದು ಹೇಳಲಾಗಿದೆ. ಸುಮಾರು ಆರು ತಿಂಗಳ ಹಿಂದೆ ಅದೇ ಗ್ರಾಮದ ದೊಡ್ಡಸ್ವಾಮಿ ಎಂಬಾತ ರಜನಿಯನ್ನು ಪ್ರೀತಿಸಿದ್ದ. ಮದುವೆಯಾಗುವಂತೆ ಒತ್ತಾಯ ಮಾಡಿದ್ದ. ಯುವಕನ ಪ್ರೀತಿಯನ್ನು ರಜನಿ ತಿರಸ್ಕರಿಸಿದ್ದಳು. ಅಪ್ರಾಪ್ತಳಾದ ಕಾರಣ ಮನೆಯವರೂ ಸಹ ದೊಡ್ಡ ಸ್ವಾಮಿಯ ಮನವಿಯನ್ನು ತಿರಸ್ಕರಿಸಿದ್ದರು. ಆದರೆ ಪಟ್ಟು ಬಿಡದ ದೊಡ್ಡಸ್ವಾಮಿ ಆಕೆಯ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ. ಒಂಟಿಯಾಗಿ ಸಿಕ್ಕಾಗ ಫೋಟೋಗಳನ್ನು ತೆಗೆದು ಫೇಸ್ ಬುಕ್ ಗೆ ಹಾಕುವುದಾಗಿ ಬೆದರಿಸಿದ್ದ. ಇದರಿಂದ ಮನನೊಂದ ರಜನಿ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುದೀರ್ಘ ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ರಜನಿ ಬುಧವಾರ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ. ಈ ಸಂಬಂಧ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





