ಚಿಕ್ಕಮಗಳೂರು: ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒತ್ತಾಯಿಸಿ ಧರಣಿ

ಚಿಕ್ಕಮಗಳೂರು, ಜ.3: ಕಡೂರು ತಾಲ್ಲೂಕು ಚಿಕ್ಕಬಾಣೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿ ಎದುರು ಬುಧವಾರ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಸಂಚಾಲಕ ದಿನೇಶ್ ಶಿವಪುರ ಮಾತನಾಡಿ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಶಾಲೆಯನ್ನು ಮುಚ್ಚಲಾಗಿತ್ತು, ಆದರೆ ಗ್ರಾಮಸ್ಥರು ತಮ್ಮ ಮಕ್ಕಳನ್ನು ದಾಖಲಿಸುವ ಮೂಲಕ ಶಾಲೆಯನ್ನು ಮತ್ತೆ ತೆರೆಯುವಂತೆ ಮಾಡಿದ್ದಾರೆ ಎಂದರು.
ಇದೀಗ ಶಾಲೆಯಲ್ಲಿ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರಿಂದಾಗಿ ಶಾಲೆಯಲ್ಲಿ ಕೊಠಡಿ ಮತ್ತು ಶಿಕ್ಷಕರ ಕೊರತೆ ಉಂಟಾಗಿದೆ ಎಂದ ಅವರು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಗ್ರಾಮಸ್ಥರೇ ಮೂವರು ಶಿಕ್ಷಕರನ್ನು ಶಾಲೆಗೆ ನೇಮಿಸಿ ಅವರೇ ಸಂಬಳ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳನ್ನು, ಶೌಚಾಲಯವನ್ನು ಮತ್ತು ಕಾಂಪೌಂಡ್ ನಿರ್ಮಾಣ ಮಾಡಬೇಕು, ಇಬ್ಬರು ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಕಛೇರಿಯ ಶಿಕ್ಷಣಾಧಿಕಾರಿ ಜಯಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು, ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಚಿಕ್ಕಕುರುಬರಹಳ್ಳಿ ಜಯಣ್ಣ, ಎನ್.ಉಮೇಶ್, ಹೆಚ್.ಎಸ್.ಹರ್ಷ, ಹೆಚ್.ಎಂ.ಸುಮಂತ್, ನಿತಿನ್, ಬಿ.ಎನ್.ಗಣೇಶ್, ಯೋಗೀಶ್ ಗೌಡ, ತಮ್ಮಯ್ಯ, ಅಶೋಕ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







