ಸಂಪ್ಯ ಎಸ್‌ಐ ವಿಚಾರದಲ್ಲಿ ಬಿಜೆಪಿ ರಾಜಕೀಯ: ಶಾಸಕಿ ಶಕುಂತಳಾ ಶೆಟ್ಟಿ
ಕಾಂಗ್ರೆಸ್ ಕಾರ್ಯಕರ್ತರ ಸಭೆ

ಪುತ್ತೂರು, ಜ. 3: ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಯಶಸ್ವೀ ಜನಪರ ಯೋಜನೆಗಳೊಂದಿಗೆ ಅತ್ಯುತ್ತಮ ಆಡಳಿತ ನಡೆಸುತ್ತಿದೆ. ಆದರೆ ಬಿಜೆಪಿ ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಾ ರಾಜಕೀಯ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ .ಇದೀಗ ಸಂಪ್ಯ ಠಾಣೆಯ ಎಸ್‌ಐ ಅಬ್ದುಲ್ ಖಾದರ್ ಅವರು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಅವರು ಆರೋಪಿಸಿದರು.
ಜನವರಿ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ತೂರಿಗೆ ಬರುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಹಿನ್ನಲೆಯಲ್ಲಿ ಸರ್ವೆ ಗ್ರಾಮದ ಕಲ್ಪನೆಯ ಸಮುದಾಯ ಭವನದಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಡೆಸಿದ ಸಮಾಲೋಚನಾ ಸಭೆಯಲ್ಲಿ ಅವರು ಸಂಪ್ಯ ಎಸ್‌ಐ ಅಬ್ದುಲ್ ಖಾದರ್ ವಿರುದ್ಧ ಬಿಜೆಪಿ ಸಂಘ ಪರಿವಾರದ ಸಂಘಟನೆಗಳು ನಡೆಯುತ್ತಿರುವ ಹೋರಾಟಕ್ಕೆ ತಿರುಗೇಟು ನೀಡಿದರು.
ಸಂಪ್ಯ ಎಸ್‌ಐ ಅವರ ವಿರುದ್ಧ ಊರವರು, ಸ್ಥಳೀಯರು ಅನ್ಯಾಯವಾಗಿದೆ ಎಂದು ಆರೋಪಿಸಿದರೆ, ಪ್ರತಿಭಟಿಸಿದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು, ಆದರೆ ಎಲ್ಲಿಯವರೋ ಆದ ಸುಳ್ಯ, ಬಂಟ್ವಾಳ, ಪಂಪ್‌ವೆಲ್‌ನವರು ಬಂದು ಪುತ್ತೂರಿನಲ್ಲಿ ಕುಳಿತು ಸಂಪ್ಯ ಎಸ್‌ಐ ಸರಿಯಿಲ್ಲ ಎಂದರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.
ಬಡವರ ಪರವಾಗಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿರುವ ಸಿದ್ದರಾಮಯ್ಯ ಅವರು ಪುತ್ತೂರಿಗೆ ಬರುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ, ಜನಪರ ಯೋಜನೆಗಳ ಮೂಲಕ ಯಶಸ್ವಿ ಮುಖ್ಯಮಂತ್ರಿ ಎನಿಸಿಕೊಂಡಿರುವ ಅವರ ಪುತ್ತೂರು ಭೇಟಿ ಕಾರ್ಯಕ್ರಮವನ್ನು ಯಸ್ವಿಗೊಳಿಸಬೇಕು, ಸಿದ್ದರಾಮಯ್ಯ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಪಡೆದ ಪ್ರತಿಯೊಬ್ಬರೂ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು ಮತ್ತು ರೆಂಜಲಾಡಿ ಮಸೀದಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಅವರು ಮಾತನಾಡಿ ಮುಖ್ಯಮಂತ್ರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ. ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಮುಂಡೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹಂಝ ಎಲಿಯ, ಉದಯ ಕುಮಾರ್ ಬಾಕುಡ, ಯುವ ಕಾಂಗ್ರೆಸ್ ತಾಲ್ಲೂಕು ಕಾರ್ಯದರ್ಶಿ ಸಿದ್ದಿಕ್ ಸುಲ್ತಾನ್ ಕೂಡುರಸ್ತೆ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಾಜಶೇಖರ್ ಆಳ್ವ ಸೊರಕೆ, ಗಣೇಶ್ ನೇರೋಳ್ತಡ್ಕ, ರೋಶನ್ ರೈ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಮುಂಡೂರು ಗ್ರಾಮ ಪಂ. ಸದಸ್ಯ ಶಿವನಾಥ ರೈ ಮೇಗಿನಗುತ್ತು ಸ್ವಾಗತಿಸಿದರು. ಶಶಿಧರ್ ಎಸ್.ಡಿ ವಂದಿಸಿದರು.







