ದಕ್ಷಿಣ ಕೊರಿಯದೊಂದಿಗಿನ ಹಾಟ್‌ಲೈನ್ ಪುನಾರಂಭ: ಉತ್ತರ

ಸಿಯೋಲ್, ಜ. 3: ದಕ್ಷಿಣ ಕೊರಿಯದತ್ತ ಚಾಚಿರುವ ಸ್ನೇಹದ ಹಸ್ತವನ್ನು ಮುಂದುವರಿಸಿರುವ ಉತ್ತರ ಕೊರಿಯ, ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ವಿಷಯದ ಬಗ್ಗೆ ಚರ್ಚಿಸಲು ದಕ್ಷಿಣ ಕೊರಿಯದೊಂದಿಗಿನ ಹಾಟ್‌ಲೈನನ್ನು ಪುನಾರಂಭಿಸುವುದಾಗಿ ಹೇಳಿದೆ.
ಉಭಯ ದೇಶಗಳ ನಡುವಿನ ಹಾಟ್‌ಲೈನ್ ನೇರ ಫೋನ್ ಸಂಪರ್ಕವನ್ನು ಉತ್ತರ ಕೊರಿಯವು 2016ರಲ್ಲಿ ಕಡಿತಗೊಳಿಸಿತ್ತು.
ಮುಂದಿನ ತಿಂಗಳು ದಕ್ಷಿಣ ಕೊರಿಯದ ಪಯಾಂಗ್‌ಚಾಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇರಾದೆಯನ್ನು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ವ್ಯಕ್ತಪಡಿಸಿದ ಬಳಿಕ, ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಶಾಂತಿ ಮಾತುಕತೆಗಳನ್ನು ನಡೆಸುವ ಪ್ರಸ್ತಾಪವನ್ನು ದಕ್ಷಿಣ ಕೊರಿಯ ಮುಂದಿಟ್ಟಿತ್ತು.
ಉತ್ತರ ಕೊರಿಯ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆ ಬಗ್ಗೆ ಚರ್ಚಿಸುವುದೂ ಸೇರಿದಂತೆ ‘ಪರಸ್ಪರ ಹಿತಾಸಕ್ತಿ’ಯ ವಿಷಯಗಳ ಬಗ್ಗೆ ಚರ್ಚಿಸಲು ಜನವರಿ 9ರಂದು ಉನ್ನತ ಮಟ್ಟದ ಮಾತುಕತೆ ನಡೆಸುವ ಪ್ರಸ್ತಾಪವನ್ನು ದಕ್ಷಿಣ ಕೊರಿಯ ಮುಂದಿಟ್ಟಿದೆ.
2015ರ ಬಳಿಕ ಇದು ಈ ರೀತಿಯ ಮೊದಲ ಮಾತುಕತೆಯಾಗಿರುತ್ತದೆ.





