ಮಡಿಕೇರಿ: ಗಣಪತಿ ಬೀದಿಯಲ್ಲಿ ಒಳಚರಂಡಿ ಕಾಮಗಾರಿಗೆ ಅಡ್ಡಿ

ಮಡಿಕೇರಿ, ಜ.3 : ನಗರದ ಗಣಪತಿ ಬೀದಿಯ ರಸ್ತೆಯಲ್ಲಿ ಯುಜಿಡಿ ಯೋಜನೆಯ ಮೂಲಕ ತೋಡಲಾಗುತ್ತಿದ್ದ ಚರಂಡಿ ಕಾಮಗಾರಿ ಸಾರ್ವಜನಿಕರ ತೀವ್ರ ವಿರೋಧದ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಅತ್ಯಂತ ಕಿರಿದಾದ ಗಣಪತಿ ಬೀದಿಯ ರಸ್ತೆಯ ಮಧ್ಯ ಭಾಗವನ್ನು ಅಗೆದು ಹಾಕಲಾಗುತ್ತಿತ್ತು. ಕಾಮಗಾರಿ ನಡೆಯುತ್ತಿದ್ದ ಸಂದರ್ಭ ನಿವಾಸಿಗಳು ಹಾಗೂ ಆಟೋ ರಿಕ್ಷಾ ಚಾಲಕರು ರಸ್ತೆ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ವಿಭಾಗದ ನಗರಸಭಾ ಸದಸ್ಯರಾದ ಸವಿತಾ ರಾಕೇಶ್ ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ಒಳಚರಂಡಿ ಕಾಮಗಾರಿಯ ಬಗ್ಗೆ ತಾವೇ ಸ್ವತಃ ಆಕ್ಷೇಪ ವ್ಯಕ್ತಪಡಿಸಿದರು. ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸ್ಪಷ್ಟ ಸೂಚನೆ ನೀಡಿದರು. ಈಗ ತೋಡಿರುವ ಚರಂಡಿಯಲ್ಲಿ ಪೈಪ್ ಅಳವಡಿಸಿ ಸಧ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಒಳಚರಂಡಿ ಕಾಮಗಾರಿ ನಿರ್ವಹಿಸುತ್ತಿರುವವರು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ನಗರದ ವಿವಿಧ ಬಡಾವಣೆ ಗಳಲ್ಲಿ ಈಗಾಗಲೆ ಒಳಚರಂಡಿ ಕಾಮಗಾರಿಯಿಂದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ. ಮನ ಬಂದಂತೆ ಅದನ್ನು ಮುಚ್ಚಿ, ಕಳಪೆ ಮಟ್ಟದಲ್ಲಿ ಡಾಮರೀಕರಣ ಮಾಡಲಾಗಿದೆ. ನಗರಸಭಾ ಸದಸ್ಯರು ಮತ್ತು ಸಾರ್ವಜನಿಕರ ವಿರೋಧದ ನಡುವೆಯೇ ಕಾಮಗಾರಿ ನಡೆಯುತ್ತಿದೆ. ಇದೀಗ ಗಣಪತಿ ಬೀದಿಯಲ್ಲಿ ಸಧ್ಯಕ್ಕೆ ಒಳಚರಂಡಿ ಕಾಮಗಾರಿ ಸ್ಥಗಿತವಾಗಿದ್ದರು ಮತ್ತೆ ಮುಂದುವರಿಯುವ ಸಾಧ್ಯತೆಗಳಿದೆ ಎಂದು ತಿಳಿದು ಬಂದಿದೆ.





