ಮಡಿಕೇರಿ: ಅರೆಯಂಡ ಹಂಸ ಬಿಜೆಪಿಗೆ ರಾಜಿನಾಮೆ

ಮಡಿಕೇರಿ, ಜ.3 :ಬಿಜೆಪಿ ಪಕ್ಷದೊಳಗಿನ ಆಂತರಿಕ ಒಪ್ಪಂದದಂತೆ ಎಮ್ಮೆಮಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ತನಗೆ ನೀಡದೆ ಇರುವುದರಿಂದ ಮತ್ತು ತನ್ನ ಕ್ಷೇತ್ರದ ಅಭಿವೃದ್ಧಿಗೆ ನಾಯಕರು ಸ್ಪಂದಿಸದೆ ಇರುವ ಕಾರಣದಿಂದ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪಂಚಾಯತ್ ಸದಸ್ಯ ಅರೆಯಂಡ ಹಂಸ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಳು ಬಿಜೆಪಿ ಸದಸ್ಯ ಬಲವನ್ನು ಹೊಂದಿರುವ ಎಮ್ಮೆಮಾಡು ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ಪಕ್ಷದೊಳಗಿನ ಒಪ್ಪಂದದಂತೆ ಅಧ್ಯಕ್ಷ ಸ್ಥಾನವನ್ನು ನೀಡಬೇಕಾಗಿತ್ತು. ಆದರೆ, ಮೊದಲು ನೀಡಿದ ಭರವಸೆಯಂತೆ ಪಕ್ಷ ನಡೆದುಕೊಳ್ಳದೆ ಇರುವುದರಿಂದ ಪಕ್ಷಕ್ಕೆ ನೀಡಿದ ರಾಜೀನಾಮೆ ಪತ್ರವನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ತಳೂರು ಕಿಶೋರ್ ಕುಮಾರ್ ಅವರಿಗೆ ನೀಡಿರುವುದಾಗಿ ತಿಳಿಸಿದರು.
ತಾನು ಪ್ರತಿನಿಧಿಸುವ ಪಡಿಯಾಣಿ ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯವನ್ನು ಒದಗಿಸಲು ಎಂಎಲ್‍ಎ ಹಾಗೂ ಎಂಎಲ್‍ಸಿಗಳ ಅನುದಾನದಿಂದ ಹಣ ನೀಡಿರುವುದಿಲ್ಲ. ಅಲ್ಲದೆ, ಗ್ರಾಮ ಪಂಚಾಯತ್ ಮೂಲಕ 14ನೇ ಹಣಕಾಸು ಯೋಜನೆಯಡಿ ವಾರ್ಷಿಕ 1.25 ಲಕ್ಷ ರೂ. ಮಾತ್ರ ಬಿಡುಗಡೆಯಾಗುತ್ತಿದ್ದು, ಉದ್ಯೋಗ ಖಾತ್ರಿ ಕಾಮಗಾರಿಯೂ ನಡೆಯದಿರುವುದರಿಂದ ಕ್ಷೇತ್ರ ಅಭಿವೃದ್ಧಿ ಶೂನ್ಯವಾಗಿದೆ. ಕ್ರಿಯಾ ಯೋಜನೆ ತಯಾರಾಗಿದ್ದರು ಹಣ ಬಿಡುಗಡೆಯಾಗುತ್ತಿಲ್ಲ. ಈ ಕಾರಣದಿಂದ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅರೆಯಂಡ ಹಂಸ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಬಿ.ಎ.ಮೊಯಿದ್ದೀನ್, ಸಿ.ಕೆ. ಇಬ್ರಾಹಿಂ, ಸಿ.ಎ. ಶಾದುಲಿ, ಪಿ.ಎ. ಅಬ್ದುಲ್ ಗಫೂರ್ ಹಾಗೂ ಕೆ.ಎ. ಹಸೈನಾರ್ ಉಪಸ್ಥಿತರಿದ್ದರು.







