ಹದಿನೈದು ಪೊಲೀಸ್ ಅಧಿಕಾರಿಗಳ ಶೂಗಳನ್ನು ನೆಕ್ಕುವಂತೆ ಮಾಡಿದರು: ದಲಿತ ವ್ಯಕ್ತಿಯಿಂದ ಆರೋಪ

ಸಾಂದರ್ಭಿಕ ಚಿತ್ರ
ಅಹ್ಮದಾಬಾದ್, ಜ.3: ಅಹ್ಮದಾಬಾದ್ನ ಪೊಲೀಸ್ ಠಾಣೆಯಲ್ಲಿ ತನ್ನ ಜಾತಿಯನ್ನು ತಿಳಿಸಿದ ನಂತರ ಹದಿನೈದು ಪೊಲೀಸ್ ಅಧಿಕಾರಿಗಳ ಶೂಗಳನ್ನು ನೆಕ್ಕುವಂತೆ ಮಾಡಲಾಗಿದೆ ಎಂದು ದಲಿತ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.
ದಲಿತ ಸಮುದಾಯಕ್ಕೆ ಸೇರಿದ 38ರ ಹರೆಯದ ಹರ್ಷದ್ ಜಾಧವ್ ನೀಡಿರುವ ದೂರಿನಂತೆ, ಡಿಸೆಂಬರ್ 28ರಂದು ತಾನು ವಾಸಿಸುವ ಪ್ರದೇಶದಲ್ಲಿ ನಡೆದ ಘರ್ಷಣೆಯೊಂದರ ಬಗ್ಗೆ ಪೊಲೀಸ್ ಪೇದೆಯಾಗಿರುವ ವಿನೋದ್ಬಾಯಿ ಬಾಬುಬಾಯಿ ಅವರಲ್ಲಿ ವಿಚಾರಿಸಿದಾಗ ಕೋಪಗೊಂಡ ಪೇದೆ ತನ್ನ ಕೈಯ್ಯಲ್ಲಿದ್ದ ಲಾಠಿಯಿಂದ ಜಾದವ್ ಕೈಗೆ ಹೊಡೆದು ಅವರ ಒಂದು ಬೆರಳಿನ ಮೂಳೆ ಮುರಿಯುವಂತೆ ಮಾಡಿದ್ದಾರೆ ಮತ್ತು ಜಾದವ್ ಕುಟುಂಬಸ್ಥರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಜಾದವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅದೇ ರಾತ್ರಿ ಅವರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಸಾರ್ವಜನಿಕ ಸೇವಕರ ಮೇಲೆ ಹಲ್ಲೆ ನಡೆಸಿದ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಜಾದವ್ ಅವರನ್ನು ಬಂಧಿಸಿದ್ದಾರೆ.
ನಂತರ ಕೆಲವು ಪೊಲೀಸ್ ಅಧಿಕಾರಿಗಳು ಜಾದವ್ರ ಜಾತಿಯ ಬಗ್ಗೆ ಪ್ರಶ್ನಿಸಿದ್ದಾರೆ. ಜಾದವ್ ತಾನು ದಲಿತ ಎಂದು ಹೇಳಿದಾಗ ಪೊಲೀಸ್ ಅಧಿಕಾರಿಗಳು ಅವರನ್ನು ಪೇದೆ ಬಾಬುಬಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಬೆದರಿಸಿದ್ದಾರೆ ಮತ್ತು ಹದಿನೈದು ಪೊಲೀಸ್ ಅಧಿಕಾರಿಗಳ ಶೂಗಳನ್ನು ನೆಕ್ಕುವಂತೆ ಒತ್ತಡ ಹೇರಿದ್ದಾರೆ ಎಂದು ಜಾದವ್ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
ಹರ್ಷದ್ ಜಾದವ್ಗೆ ನ್ಯಾಯಾಲಯವು ಡಿಸೆಂಬರ್ 29ರಂದು ಜಾಮೀನು ಮಂಜೂರು ಮಾಡಿತ್ತು. ಸದ್ಯ ಜಾದವ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸ್ ಪೇದೆಯ ವಿರುದ್ಧ ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಈ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ವಹಿಸಲಾಗಿದೆ ಎಂದು ಅಮ್ರೈವಾಡಿ ಪೊಲೀಸ್ ಠಾಣೆಯ ನಿರೀಕ್ಷಕರಾದ ಓಮ್ ದೇಸಾಯಿ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಡಿಸಿಪಿ ಗಿರೀಶ್ ಪಾಂಡ್ಯ ಜಾದವ್ ವಿಳಂಬವಾಗಿ ದೂರು ದಾಖಲಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಜಾದವ್ ಅವರನ್ನು ಬಂಧಿಸಿ ಡಿಸೆಂಬರ್ 29ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಅವರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ನ್ಯಾಯಾಲಯದಲ್ಲಿ ಏನನ್ನೂ ಹೇಳಲಿಲ್ಲ.ಜನವರಿ ಒಂದರಂದು ಜನರ ಗುಂಪು ಠಾಣೆಯ ಮುಂದೆ ಜಮಾಯಿಸಿ ಪೇದೆಯ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿತ್ತು. ಹಾಗಾಗಿ ನಾವು ದೂರು ದಾಖಲಿಸಿದ್ದೇವೆ. ಸದ್ಯ ಈ ಪ್ರಕರಣವನ್ನು ಕ್ರೈಂ ಬ್ರಾಂಚ್ ನೋಡಿಕೊಳ್ಳುತ್ತಿದೆ ಎಂದು ಪಾಂಡ್ಯ ತಿಳಿಸಿದ್ದಾರೆ.