ಬಸ್ ಚಾಲಕನ ಮೇಲೆ ಹಲ್ಲೆ ಪ್ರಕರಣ: ಇನ್ನೋರ್ವ ಆರೋಪಿಯ ಬಂಧನ
ಪುತ್ತೂರು, ಜ. 3: ಪುತ್ತೂರು ನಗರದ ಹೊರವಲಯದ ನೆಹರೂ ನಗರದಲ್ಲಿ ಶುಕ್ರವಾರ ರಾತ್ರಿ ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರದಲ್ಲಿ ಕೆಎಸ್ಸಾರ್ಟಿಸಿ ಬಸ್ ಚಾಲಕನೊಬ್ಬನನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದ ಇನ್ನೊಬ್ಬ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಪುತ್ತೂರು ತಾಲ್ಲೂಕಿನ ಕಬಕ ಗ್ರಾಮದ ನೆಹರೂನಗರ ಸಮೀಪದ ಪಟ್ಲ ನಿವಾಸಿ ಧನು ಯಾನೆ ಧನಂಜಯ (32) ಬಂಧಿತ ಆರೋಪಿ.
ಈ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು ಈ ಹಿಂದೆ ಪ್ರಕರಣದ ಪ್ರಮುಖ ಆರೋಪಿಯಾದ ಚಾಲಕ ನೆಲ್ಯಾಡಿಯ ಜೋಯ್ ಎಂಬಾತನನ್ನು ಬಂಧಿಸಿದ್ದರು.
ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ಬಸ್ ಚಾಲಕರಾದ ಹೊನ್ನಾವರದ ರಾಮಕೃಷ್ಣ ಶ್ಯಾನ್‌ಭಾಗ್ (35) ಎಂಬವರ ಮೇಲೆ ಕಳೆದ ಶುಕ್ರವಾರ ರಾತ್ರಿ ಹಲ್ಲೆ ನಡೆದಿತ್ತು. ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನಿಂದ ಪುತ್ತೂರಿಗೆ ರಾಮಕೃಷ್ಣ ಶ್ಯಾನ್‌ಬಾಗ್ ಅವರು ಚಲಾಯಿಸಿಕೊಂಡು ಬರುತ್ತಿದ್ದ ಕೆಸ್ಸಾರ್ಟಿಸಿ ಬಸ್ಸನ್ನು ಹಿಂದಿನಿಂದ ಹಿಂಬಾಲಿಸಿಕೊಂಡು ಬಂದ ಕಾಂಟ್ರಕ್ಟ್ ಕ್ಯಾರೇಜ್ ಬಸ್ಸಿನ ಚಾಲಕ ನೆಲ್ಯಾಡಿಯ ಜೋಯ್ ಮತ್ತು ಇತರ ಮೂವರು ಸೇರಿಕೊಂಡು ಬಸ್ಸಿನ ಅವಧಿ ಮತ್ತು ಪ್ರಯಾಣಿಕರನ್ನು ಪಿಕಪ್ ಮಾಡುವ ವಿಚಾರದಲ್ಲಿ ತಗಾದೆ ಎತ್ತಿ ಅವರನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿತ್ತು.
ಈ ಪ್ರಕರಣ ನಡೆದ ಬೆನ್ನಲ್ಲೇ ಪ್ರಮುಖ ಆರೋಪಿ ಜೋಯ್ ಎಂಬವರನ್ನು ಬಂಧಿಸುವಲ್ಲಿ ಪುತ್ತೂರು ನಗರ ಪೊಲೀಸರು ಯಶಸ್ವಿಯಾಗಿದ್ದರು. ನಗರ ಠಾಣೆಯ ಎಸ್‌ಐ ಅಜೇಯ್ ಕುಮಾರ್ ಡಿ.ಎನ್ ನೇತೃತ್ವದಲ್ಲಿ ಪುತ್ತೂರು ನಗರ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಆರೋಪಿ ಧನು ಯಾನೆ ಧನಂಜಯನನ್ನು ಬಂಧಿಸಿದ್ದಾರೆ.
ಪೊಲೀಸರಿಂದ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಕರಣ ಪ್ರಮುಖ ಆರೋಪಿ ಜೋಯ್‌ಗೆ ಪುತ್ತೂರು ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಇದೀಗ ಬಂಧನಕ್ಕೊಳಗಾದ ಧನು ಯಾನೆ ಧನಂಜಯನನ್ನು ಪುತ್ತೂರು ನಗರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.







