ಮಹಾರಾಷ್ಟ್ರ ಓಪನ್: ಎರಡನೇ ಸುತ್ತಿನಲ್ಲಿ ಎಡವಿದ ಭಾಂಬ್ರಿ

ಪುಣೆ, ಜ.3: ಟಾಟಾ ಮಹಾರಾಷ್ಟ್ರ ಓಪನ್‌ನಲ್ಲಿ ಭಾರತದ ಯುವ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಎರಡನೇ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾಂಬ್ರಿ 8ನೇ ಶ್ರೇಯಾಂಕದ ಫ್ರೆಂಚ್ ಆಟಗಾರ ಹ್ಯೂಸ್ ಹೆರ್ಬರ್ಟ್ ವಿರುದ್ಧ 6-4, 3-6, 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
118ನೇ ರ್ಯಾಂಕಿನ ಆಟಗಾರ ಭಾಂಬ್ರಿ ಮೊದಲ ಸೆಟ್‌ನ್ನು 6-4 ಅಂತರದಿಂದ ಗೆಲುವು ಸಾಧಿಸಿ ಉತ್ತಮ ಆರಂಭ ಪಡೆದಿದ್ದರು. ಆದರೆ, ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಸೋತಿರುವ ಭಾಂಬ್ರಿ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಹೆರ್ಬರ್ಟ್ ಕಳಪೆ ಆರಂಭ ಪಡೆದಿದ್ದರೂ ಎರಡು ಹಾಗೂ 3ನೇ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಭಾಂಬ್ರಿಗೆ ಒತ್ತಡ ಹೇರಲು ಸಫಲರಾದರು.
ಎರಡನೇ ಗೇಮ್‌ನಲ್ಲಿ ಒಂದು ಹಂತದಲ್ಲಿ ಹೆಬರ್ಟ್ 0-40ರಿಂದ ಹಿನ್ನಡೆಯಲ್ಲಿದ್ದರು. ಪುಣೆಯ ಟೆನಿಸ್ ಕೋರ್ಟ್‌ನಲ್ಲಿ ಸತತ 11 ಪಂದ್ಯಗಳನ್ನು ಜಯಿಸಿರುವ ಭಾಂಬ್ರಿಗೆ ಮುನ್ನಡೆಯ ಲಾಭ ಪಡೆಯಲು ಸಾಧ್ಯವಾಗಲಿಲ್ಲ.
ಮುಂದಿನ ಸುತ್ತಿಗೇರಲು ಈ ಹಂತದಲ್ಲಿ ಅವರು ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿತ್ತು. ಕೆಲವು ಅವಕಾಶಗಳನ್ನು ಕೈಚೆಲ್ಲಿದ ಬಳಿಕ ಭಾಂಬ್ರಿ ಅವರ ಹತಾಶರಾದಂತೆ ಕಂಡು ಬಂದರು.
ಸಿಂಗಲ್ಸ್‌ನಲ್ಲಿ ಭಾರತದ ಸವಾಲು ಇನ್ನೂ ಕೊನೆಗೊಂಡಿಲ್ಲ. ವೈರ್ಲ್ಡ್ ಕಾರ್ಡ್ ಮೂಲಕ ಪ್ರವೇಶ ಗಿಟ್ಟಿಸಿಕೊಂಡಿರುವ ರಾಮ್‌ಕುಮಾರ್ ರಾಮನಾಥನ್ ಅಗ್ರ ಶ್ರೇಯಾಂಕದ ಹಾಗೂ ವಿಶ್ವದ ನಂ.6ನೇ ಆಟಗಾರ ಮರಿನ್ ಸಿಲಿಕ್‌ರನ್ನು ಎದುರಿಸಲಿದ್ದಾರೆ.







