ತುಪ್ಪದ ಅದ್ಭುತ ಆರೋಗ್ಯ ಲಾಭಗಳು ಗೊತ್ತೇ....?
ದ್ರವರೂಪದ ಬಂಗಾರ ಎಂದೇ ಹೆಸರಾಗಿರುವ ತುಪ್ಪ ಆರೋಗ್ಯಲಾಭಗಳ ಖಜಾನೆಯಾಗಿದ್ದು, ಮತ್ತೆ ಭಾರತೀಯರ ಅಡುಗೆಮನೆಯಲ್ಲಿ ಸ್ಥಾನವನ್ನು ಕಂಡುಕೊಂಡಿದೆ. ಕೆಲವೇ ವರ್ಷಗಳ ಹಿಂದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯಿದ್ದ ಹೆಚ್ಚಿನವರು ತುಪ್ಪವನ್ನು ದೂರವಿಟ್ಟಿದ್ದರು. ಅದು ಶರೀರದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ ಮತ್ತು ಅನಾರೋಗ್ಯವನ್ನುಂಟು ಮಾಡುತ್ತದೆ ಎನ್ನುವುದು ಇದಕ್ಕೆ ಕಾರಣವಾಗಿತ್ತು. ಈ ಕಾರಣ ನಿಜವಿರಬಹುದು, ಆದರೆ ಸೀಮಿತ ಪ್ರಮಾಣದಲ್ಲಿ ತುಪ್ಪದ ಸೇವನೆ ನಿಜಕ್ಕೂ ನಮ್ಮ ಶರೀರಕ್ಕೆ ಹಲವಾರು ಅದ್ಭುತ ಆರೋಗ್ಯಲಾಭಗಳನ್ನು ನೀಡುತ್ತದೆ.
ಕರುಳಿನ ಮಿತ್ರ
ನಮ್ಮ ಕರುಳು ಆರೋಗ್ಯಯುತವಾಗಿದ್ದರೆ ನಾವೂ ಆರೋಗ್ಯಯುತವಾಗಿರುತ್ತೇವೆ. ತುಪ್ಪ ಕರುಳಿನ ಪೋಷಣೆಗೆ ನೆರವಾಗುವ ಜೊತೆಗೆ ಗ್ಯಾಸ್ಟ್ರಿಕ್ ಅಲ್ಸರ್ ಉಂಟಾಗುವುದನ್ನು ತಡೆಯುತ್ತದೆ. ಅದು ಆಮ್ಲೀಯತೆಯನ್ನು ತಗ್ಗಿಸುತ್ತದೆ, ಹೀಗಾಗಿ ಹೊಟ್ಟೆಯಲ್ಲಿ ನಿರಂತರ ವಾಗಿ ವಾಯು ಉತ್ಪತ್ತಿಯಾಗುವ ತೊಂದರೆಗೆ ಉತ್ತಮ ಚಿಕಿತ್ಸೆಯಾಗಿದೆ. ಸಹಜ ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೆ ಮಲಬದ್ಧತೆಯ ಕಷ್ಟವನ್ನೂ ನಿವಾರಿಸುತ್ತದೆ.
ವಿಟಾಮಿನ್ಗಳ ಕೊರತೆಯನ್ನು ನೀಗಿಸುತ್ತದೆ
ಶರೀರದಲ್ಲಿ ಎ,ಡಿ,ಇ ಮತ್ತು ಕೆ ವಿಟಾಮಿನ್ಗಳ ಕೊರತೆಯಿದೆಯೇ? ಹಾಗಿದ್ದರೆ ಆಹಾರದಲ್ಲಿ ಖಂಡಿತವಾಗಿಯೂ ತುಪ್ಪವಿರಲೇಬೇಕು. ಈ ವಿಟಾಮಿನ್ಗಳು ಮೂಳೆ, ಮಿದುಳು ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅಗತ್ಯವಾಗಿವೆ. ಉತ್ಕರ್ಷಣ ನಿರೋಧಕಗಳನ್ನು ಸಮೃದ್ಧವಾಗಿ ಹೊಂದಿರುವ ತುಪ್ಪವು ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ಅತ್ಯಂತ ಸೂಕ್ತವಾಗಿದೆ. ‘ಧನಾತ್ಮಕ ಆಹಾರ’ ಎಂದು ಪರಿಗಣಿಸ ಲಾಗಿರುವ ಅದು ಆಹಾರಕ್ಕೆ ರುಚಿಯನ್ನು ನೀಡುತ್ತದೆ. ಹಾರ್ಮೋನ್ಗಳ ಸಮತೋಲನ ವನ್ನು ಕಾಯ್ದುಕೊಳ್ಳಲು ನೆರವಾಗುವ ಅದು ಮಹಿಳೆಯರಲ್ಲಿ ಮಾಸಿಕ ಮುಟ್ಟಿನ ಮೊದಲಿನ ದಿನಗಳಲ್ಲಿ ಕಾಣಿಸಿಕೊಳ್ಳುವ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ನಿಯಂತ್ರಿಸು ತ್ತದೆ.
ಕೂದಲಿಗೆ ಹೊಳಪು ನೀಡುತ್ತದೆ
ತುಪ್ಪದ ಸೇವನೆಯು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಚಳಿಗಾಲದಲ್ಲಿ ಒಣಚರ್ಮದ ಕಿರಿಕಿರಿಯಿಂದ ಪಾರಾಗಲು ಶರೀರ ಮತ್ತು ಮುಖಕ್ಕೆ ತುಪ್ಪವನ್ನು ಸವರಿಕೊಂಡರೆ ಅದು ಅದ್ಭುತ ಪರಿಣಾಮವನ್ನು ನೀಡುತ್ತದೆ. ತಲೆಗೂದಲಿಗೂ ಹೊಳಪು ನೀಡುವ ಜೊತೆಗೆ ಅದನ್ನು ಆರೋಗ್ಯಯುತವಾಗಿಸುತ್ತದೆ.
ತೂಕವನ್ನು ಕಡಿಮೆಯಾಗಿಸಲು ಸಹಕಾರಿ
ಹೌದು, ನೀವು ಸರಿಯಾಗಿಯೇ ಓದಿದ್ದೀರಿ. ಶರೀರದ ತೂಕವನ್ನು ಕಡಿಮೆ ಮಾಡಿಕೊ ಳ್ಳಲು ತುಪ್ಪ ಒಳ್ಳೆಯದು! ಅದರಲ್ಲಿ ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ಶರೀರವು ಸುಲಭವಾಗಿ ಹೀರಿಕೊಳ್ಳುತ್ತದೆ. ಅದು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ.
ಗರ್ಭಿಣಿಯರಿಗೆ ಅತ್ಯಗತ್ಯ
ತುಪ್ಪವು ಭ್ರೂಣದ ಬೆಳವಣಿಗೆಗೆ ಪೂರಕವಾಗಿರುವುದರಿಂದ ಅದನ್ನು ನಿತ್ಯದ ಆಹಾರ ದಲ್ಲಿ ಸೇವಿಸುವಂತೆ ವೈದ್ಯರು ಗರ್ಭಿಣಿಯರಿಗೆ ಶಿಫಾರಸು ಮಾಡುತ್ತಾರೆ.
ಕೊಲೆಸ್ಟ್ರಾಲ್ನ್ನು ತಗ್ಗಿಸುತ್ತದೆ
ಮಾರುಕಟ್ಟೆಯಲ್ಲಿ ದೊರೆಯುವ ಸಸ್ಯಜನ್ಯ ತೈಲಗಳು ಮತ್ತು ಬೆಣ್ಣೆಗಿಂತ ತುಪ್ಪ ಯಾವಾಗಲೂ ಒಳ್ಳೆಯದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅದರಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಕಡಿಮೆ ಪ್ರಮಾಣದಲ್ಲಿರುತ್ತದೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಯುಳ್ಳವರಿಗೆ ಆರೋಗ್ಯಕರ ಆಯ್ಕೆಯಾಗಿದೆ. ತುಪ್ಪವು ತೆಂಗಿನೆಣ್ಣೆ, ಆಲಿವ್ ಎಣ್ಣೆ, ಬೆಣ್ಣೆ ಇತ್ಯಾದಿಗಳಿಗಿಂತ ಹೆಚ್ಚಿನ ಸ್ಮೋಕ್ ಪಾಯಿಂಟ್ನ್ನು ಹೊಂದಿದೆ, ಅಂದರೆ ಬಾಣಲೆಯಲಿ ಕಾಯಿಸಿದಾಗ ಅದು ಇತರ ಎಣ್ಣೆಗಳಿಗಿಂತ ಬೇಗನೇ ದಟ್ಟ ಹೊಗೆಯನ್ನು ಹೊರಸೂಸುತ್ತದೆ. ಈ ಹಂತದಲ್ಲಿ ಹಾನಿಕಾರಕ ಫ್ರೀ ರ್ಯಾಡಿಕಲ್ಗಳು ಹೊರಗೆ ತಳ್ಳಲ್ಪಡುತ್ತವೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಆಗಾಗ್ಗೆ ಕಾಯಿಲೆ ಬೀಳುವವರು ಪ್ರತಿದಿನ ಊಟದೊಂದಿಗೆ ಸ್ವಲ್ಪ ತುಪ್ಪವನ್ನು ಸೇವಿಸುವುದರಿಂದ ಈ ಕಿರಿಕಿರಿಯಿಂದ ಪಾರಾಗಬಹುದು. ಅದರಲ್ಲಿಯ ಉತ್ಕರ್ಷಣ ನಿರೋಧಕ, ವೈರಸ್ ನಿರೋಧಕ, ಬ್ಯಾಕ್ಟೀರೀಯಾ ನಿರೋಧಕ ಮತ್ತು ಬೂಷ್ಟು ನಿರೋಧಕ ಗುಣಗಳು ಶರೀರದ ಸ್ವಯಂ ರಕ್ಷಣಾ ವ್ಯವಸ್ಥೆಯನ್ನು ಉತ್ತಮಗೊಳಿಸಲು ನೆರವಾಗುತ್ತವೆ. ಎಮ್ಮೆಯ ತುಪ್ಪವು ಆರೋಗ್ಯಕರ ಮೂಳೆಗಳು, ಹಲ್ಲುಗಳ ಆರೋಗ್ಯ ಮತ್ತು ಶರೀರದ ತೂಕ ಹೆಚ್ಚಳಕ್ಕೆ ಹೇಳಿ ಮಾಡಿಸಿದಂತಿದೆ.
ಸುಟ್ಟ ಗಾಯಕ್ಕೂ ಶಮನಕಾರಿ
ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸುಟ್ಟಗಾಯವಾಗಿದ್ದರೆ ಆ ಜಾಗದಲ್ಲಿ ಸ್ವಲ್ಪ ತುಪ್ಪ ಸವರಿಬಿಡಿ. ಇದರಿಂದ ಸಣ್ಣಪುಟ್ಟ ಗಾಯಗಳು ಬೇಗನೆ ಮಾಯುತ್ತವೆ.
ಸಂದುಗಳಿಗೆ ಉತ್ತಮ ಕೀಲೆಣ್ಣೆ
ನಿಯಮಿತವಾಗಿ ತುಪ್ಪ ಸೇವಿಸುವುದರಿಂದ ಅದು ಕೀಲೆಣ್ಣೆಯಂತೆ ಕೆಲಸ ಮಾಡುತ್ತದೆ ಮತ್ತು ಮೂಳೆಗಳನ್ನು ಬಲಗೊಳಿಸುತ್ತದೆ. ಹೀಗಾಗಿ ಶರೀರದಲ್ಲಿಯ ಸಂದುಗಳ ಆರೋಗ್ಯ ಉತ್ತಮವಾಗಿರುತ್ತದೆ. ಸಂಧಿವಾತಕ್ಕೂ ಅದು ಉತ್ತಮವಾಗಿದೆ.
ವ್ಯಕ್ತಿಯೋರ್ವ ಪ್ರತಿದಿನ 15-20 ಎಂ.ಎಲ್ ತುಪ್ಪ ಸೇರಿದಂತೆ 3-4 ಚಮಚ ಎಣ್ಣೆಯನ್ನು ಸೇವಿಸಬೇಕು ಎನ್ನುವುದು ತಜ್ಞರ ಶಿಫಾರಸು. ಈ ಪೈಕಿ ವಯಸ್ಕರು ಒಂದು ಚಮಚ ಮತ್ತು ಮಕ್ಕಳು ಎರಡು ಚಮಚ ತುಪ್ಪವನ್ನು ಸೇವಿಸಬಹುದಾಗಿದೆ. ಈ ಮಿತಿಯನ್ನೆಂದಿಗೂ ದಾಟಬಾರದು ಎನ್ನುವುದು ನೆನಪಿರಲಿ.
ಆದರೆ ಹೃದ್ರೋಗ, ಅತಿಯಾದ ತೂಕ ಮತ್ತು ಬೊಜ್ಜುದೇಹ ಹೊಂದಿದವರು ತುಪ್ಪದಿಂದ ದೂರವುಳಿಯುವುದು ಒಳ್ಳೆಯದು.