ಜಿಗ್ನೇಶ್, ಉಮರ್ ಖಾಲಿದ್ ವಿರುದ್ಧ ಎಫ್ ಐಆರ್ ದಾಖಲು

ಪುಣೆ, ಜ.4: ಇಲ್ಲಿನ ಶನಿವಾರ್ವಡ ಎಂಬಲ್ಲಿ ಡಿಸೆಂಬರ್ 31ರಂದು ನಡೆದ ಎಲ್ಗಾರ್ ಪರಿಷದ್ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಜಿಗ್ನೇಶ್ ಮೇವಾನಿ ಹಾಗೂ ಜೆಎನ್‍ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ವಿರುದ್ಧ ಪುಣೆ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ತಾವು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ಹೇಳಿಕೊಂಡಿರುವ ಇಬ್ಬರು ಯುವಕರಾದ ಅಕ್ಷಯ್ ಬಿಕ್ಕಡ್ ಹಾಗೂ ಆನಂದ್ ಧೊಂಡ್ ಎಂಬವರು ಡೆಕ್ಕನ್ ಜಿಮ್‍ಖಾನ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ್ದ ದೂರಿನನ್ವಯ ಪ್ರಕರಣ ದಾಖಲಿಸಲಾಗಿದೆ.
"ನಾವು ಪೇಶ್ವರ ವಿರುದ್ಧ ಗೆಲ್ಲಬೇಕಾದರೆ ಭೀಮಾ ಕೊರೆಗಾಂವ್ ಹೋರಾಟವನ್ನು ಮುಂದುವರಿಸಬೇಕು ಹಾಗೂ ಹಿಂದಿನ ಹೋರಾಟದಿಂದ ಸ್ಫೂರ್ತಿ ಪಡೆಯಬೇಕು. ಇದು ಚುನಾವಣಾ ರಾಜಕೀಯದಿಂದ ಸಾಧ್ಯವಿಲ್ಲ. ಸಮಾನ ಉದ್ದೇಶಕ್ಕಾಗಿ ಹೋರಾಡುವವರು ಗುಜರಾತ್ ಅಥವಾ ಮಹಾರಾಷ್ಟ್ರ ವಿಧಾನಸಭೆಗಳಲ್ಲಿ ಹಾಗೂ ಈ ದೇಶದ ಸಂಸತ್ತಿನಲ್ಲಿರಬೇಕು ಎಂಬುದು ನಿಜ. ಆದರೆ ಜಾತಿ ತಾರತಮ್ಯವನ್ನು ಬೀದಿ ಹೋರಾಟದ ಮೂಲಕ ಮಾತ್ರ ಅಳಿಸಬಹುದು. ಇನ್ನೊಬ್ಬರ ಮೇಲೆ ಒಂದು ವರ್ಗದ ಜನರ ದಬ್ಬಾಳಿಕೆ ಬೀದಿ ಹೋರಾಟದ ಮೂಲಕ ಅಂತ್ಯಗೊಳ್ಳುವುದು'' ಎಂದು ಜಿಗ್ನೇಶ್ ಹೇಳಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಪೊಲೀಸರು ಇಬ್ಬರು ನಾಯಕರ ಭಾಷಣಗಳನ್ನೂ ಪರಿಶೀಲಿಸುತ್ತಿದ್ದಾರೆ.