ಹನೂರು: ಜ.10 ರಂದು ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶ

ಹನೂರು,ಜ.4 : ಸಿಎಂ ಸಿದ್ಧರಾಮಯ್ಯ ಅವರು ಜ.10ಕ್ಕೆ ಹನೂರಿಗೆ ಆಗಮಿಸಲಿದ್ದು, ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ವೇಳೆ ಅವರು ಹನೂರು ತಾಲೂಕನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಕ್ಷೇತ್ರದ ಜನರು ಪಕ್ಷಾತೀತವಾಗಿ ಭಾಗವಹಿಸುವಂತೆ ಪ್ರತಿಯೊಂದು ಗ್ರಾಮದಲ್ಲೂ ಕರೆ ನೀಡಿ ಎಂದು ಶಾಸಕ ಆರ್. ನರೇಂದ್ರರಾಜೂಗೌಡ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಆವರಣದಲ್ಲಿ ನಡೆದ ಕಾಂಗ್ರೆಸ್‍ನ ಜನಪ್ರತಿನಿಧಿಗಳು, ಕಾರ್ಯಕರ್ತರು ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಹನೂರು ತಾಲೂಕನ್ನಾಗಿ ಮಾಡಬೇಕು ಎಂದು ಹಲವು ವರ್ಷಗಳ ಹನೂರು ಕ್ಷೇತ್ರದ ಜನತೆಯ ಕೂಗಿಗೆ ಸ್ಪಂದನೆ ಸಿಕ್ಕಿದೆ. ಕ್ಷೇತ್ರದ ಜನತೆ ಪಕ್ಷ ಬೇದವನ್ನು ಬದಿಗಿಟ್ಟು ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಲು ಕಾರ್ಯಕರ್ತರು ತಮ್ಮ ತಮ್ಮ ಗ್ರಾಮದಲ್ಲಿ ಕರೆ ನೀಡಿ ಎಂದರು. ಅಲ್ಲದೇ ಪಟ್ಟಣದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಎಂಡಿಸಿಸಿ ಬ್ಯಾಂಕ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಇದರ ಜತೆಗೆ 8 ಕೋಟಿ ರೂ ವೆಚ್ಚದಲ್ಲಿನ ಹನೂರು-ರಾಮಾಪುರ ರಸ್ತೆ ನಿರ್ಮಾಣ ಕಾಮಗಾರಿ, 7.5 ಕೋಟಿ ರೂ ವೆಚ್ಚದಲ್ಲಿ ರಾಮಾಪುರ-ಸತ್ತಿಮಂಗಲ ರಸ್ತೆ ನಿರ್ಮಾಣ ಕಾಮಗಾರಿ, 34 ಕೋಟಿ ರೂ ವೆಚ್ಚದಲ್ಲಿ ರಾಮಾಪುರ ಹಾಗೂ ಪಾಳ್ಯದಲ್ಲಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ನಿರ್ಮಾಣ ಕಾಮಗಾರಿ ಸೇರಿದಂತೆ ಕ್ಷೇತ್ರದಲ್ಲಿನ ಇನ್ನಿತರ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
100 ಅಡಿ ಎತ್ತರದ ಮಹದೇಶ್ವರ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ: ಮಲೆಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನ ಬಳಿ ಮಾಜಿ ಸಚಿವ ದಿ.ಹೆಚ್.ಎಸ್.ಮಹದೇವಪ್ರಸಾದ್ ಅವರು ನಿರ್ಮಿಸಲು ಉದ್ದೇಶಿಸಲಾಗಿದ್ದ 100 ಅಡಿ ಎತ್ತರದ ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕೆ 20 ಕೋಟಿ ರೂ ಅನುದಾನ ಬಿಡುಗಡೆಯಾಗಿದ್ದು, ಅದರ ನಿರ್ಮಾಣ ಕಾಮಗಾರಿಗೆ ಜ.10ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಟ್ಟದಲ್ಲಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಅಲ್ಲದೇ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಬೆಟ್ಟದ ದೇಗುಲದ ಮುಂಭಾಗದ ರಂಗಮಂದಿರದ ಬಳಿ ಭಕ್ತರು ತಂಗಲು ನಿರ್ಮಿಸಿರುವ ಬೃಹತ್ ಶೆಡ್ ಹಾಗೂ 3 ಕೋಟಿ ರೂ ವೆಚ್ಚದಲ್ಲಿ ವಡಕೆಹಳ್ಳದ ಬಳಿ ನಿರ್ಮಿಸಲಾಗಿರುವ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಇದರ ಜತೆಗೆ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಹಲವು ಅಭಿವೃದ್ಧಿ ಯೋಜನೆಗಳ ಘೋಷಣೆ: ಕ್ಷೇತ್ರದ 291 ಹಳ್ಳಿಗಳಿಗೆ ಸುಮಾರು 400 ಕೋಟಿ ರೂ ವೆಚ್ಚದಲ್ಲಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, 135 ಕೋಟಿ ರೂ ವೆಚ್ಚದಲ್ಲಿ ಸಲ್ಲಿಸಿರುವ ಪ್ರಸ್ತಾವನೆಯಂತೆ ನದಿ ಮೂಲದಿಂದ ಕ್ಷೇತ್ರದ ರಾಮನಗುಡ್ಡೆ, ಹುಬ್ಬೆಹುಣಸೆ ಹಾಗೂ ಗುಂಡಾಲ್ ಜಲಾಶಯಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಕೆ.ಶಿಫ್ ಯೋಜನೆಯಡಿ 108 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ಕೊಳ್ಳೇಗಾಲದಿಂದ ಹನೂರಿನವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಇನ್ನಿತರ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಿದರು.







