ಮುಸ್ಲಿಮರಲ್ಲಿ ಉದ್ಯಮಶೀಲತೆ ವೃದ್ಧಿಸಲು ಕ್ರಮ: ಎ.ಎಸ್.ಖಾನ್
ಬೆಂಗಳೂರು, ಜ.4: ಮುಸ್ಲಿಮರಲ್ಲಿ ಉದ್ಯಮಶೀಲತೆಯನ್ನು ವೃದ್ಧಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಮುಸ್ಲಿಮ್ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎ.ಎಸ್.ಖಾನ್ ತಿಳಿಸಿದರು.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ದಾರುಸ್ಸಲಾಮ್ ಕಟ್ಟಡದಲ್ಲಿನ ಮುಸ್ಲಿಮ್ ಕೈಗಾರಿಕೋದ್ಯಮಿಗಳ ಸಂಘದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂದ ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯಗಳ ಕುರಿತು ಉದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕೆಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಮುಸ್ಲಿಮ್ ಸಮುದಾಯದ ಯುವಕ, ಯುವತಿಯರಿಗೆ ನಮ್ಮ ಸಂಘವು ಸೂಕ್ತ ಮಾರ್ಗದರ್ಶನ ನೀಡುತ್ತದೆ ಎಂದು ಅವರು ಹೇಳಿದರು.
5-7 ವರ್ಷಗಳ ಕಾಲ ಯಾವುದಾದರೂ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಯುವಕರು, ನವೋದ್ಯಮ ಆರಂಭಿಸಲು ಮುಂದಾದರೆ ಅವರಿಗೆ ನೈತಿಕ ಬೆಂಬಲ ನೀಡುವುದರ ಜತೆಗೆ, ಸಂಸ್ಥೆಯ ನೋಂದಣಿ ಸೇರಿದಂತೆ ಎಲ್ಲ ರೀತಿಯ ಮಾರ್ಗದರ್ಶನ ನೀಡಲಾಗುವುದು ಎಂದು ಎ.ಎಸ್.ಖಾನ್ ತಿಳಿಸಿದರು.
ಸಂಘದ ಜಂಟಿ ಕಾರ್ಯದರ್ಶಿ ಆದಿಲ್ ರಹ್ಮಾನ್ ಮಾತನಾಡಿ, ಸುಮಾರು 100 ಮಂದಿ ಯುವಕರಲ್ಲಿ ಉದ್ಯಮಶೀಲತೆಯನ್ನು ಬೆಳೆಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ, ಆಸಕ್ತ ಯುವಕರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಲೀಡ್ ಸಂಸ್ಥೆ ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಈ ಅವಕಾಶ ಲಭ್ಯವಾಗಲಿದೆ ಎಂದರು.
8ನೆ ತರಗತಿಯಿಂದಲೇ ಯುವಕರಲ್ಲಿ ಉದ್ಯಮಶೀಲತೆ ಕುರಿತು ಆಸಕ್ತಿ ಬೆಳೆಸಿ, ಜೆಇಇ ಅಡ್ವಾನ್ಸ್, ಆಡಳಿತ ವರ್ಗದಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಗೋಲ್ಡನ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಯುಪಿಎಸ್ಸಿ ಪರೀಕ್ಷೆಗಳನ್ನು ಕೈಗೊಳ್ಳುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮೀರ್ ಅಬ್ದುಲ್ ಹಫೀಝ್ ಸೇರಿದಂತೆ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.







