110 ಗ್ರಾಮಗಳಿಗೆ ಕುಡಿಯುವ ನೀರು-ಒಳಚರಂಡಿ ವ್ಯವಸ್ಥೆ: ಕೆ.ಜೆ.ಜಾರ್ಜ್

ಬೆಂಗಳೂರು, ಜ.4: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲು ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
ಗುರುವಾರ ನಗರದ ಕೆ.ಜಿ.ರಸ್ತೆಯಲ್ಲಿರುವ ಬೆಂಗಳೂರು ಜಲಮಂಡಳಿ ಭವನದ ಸಭಾಂಗಣದಲ್ಲಿ ಅಭಿಯಂತರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 2018ನೆ ಸಾಲಿನ ತಾಂತ್ರಿಕ ದಿನಚರಿ, ದಿನದರ್ಶಿನಿ ಬಿಡುಗಡೆ ಹಾಗೂ ಮುಸ್ಸಂಜೆ ಯೋಜನೆ ಯಡಿಯಲ್ಲಿ ಜಲಮಂಡಳಿಯ ನಿವೃತ್ತ ನೌಕರರಿಗೆ ವೈದ್ಯಕೀಯ ಸೌಲಭ್ಯದ ಸ್ಮಾರ್ಟ್ ಕಾರ್ಡ್ ವಿತರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ಕರೆಯುವುದು ಸುಲಭ. ಆದರೆ, ಅದರ ವ್ಯಾಪ್ತಿಗೆ ಸೇರಿದ 110 ಗ್ರಾಮಗಳಿಗೆ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಮಾಡಿರಲಿಲ್ಲ. ನಮ್ಮ ಸರಕಾರ ಈನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಜಾರ್ಜ್ ತಿಳಿಸಿದರು.
ಕೆರೆಗಳ ನೀರು ಕಲುಶಿತವಾಗುತ್ತಿದೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅದನ್ನು ತಡೆಗಟ್ಟಲು ಈ ಹಿಂದೆ ಯಾವ ಕ್ರಮಗಳು ಕೈಗೊಂಡಿರಲಿಲ್ಲ. ಬೆಂಗಳೂರು ನಗರಕ್ಕೆ ಪ್ರತಿದಿನ 1800 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಶೇ.80ರಷ್ಟು ತ್ಯಾಜ್ಯ ನೀರು ಸಂಸ್ಕರಣೆ ಮಾಡಲು ಅಗತ್ಯವಿರುವ ಎಸ್‌ಟಿಪಿಗಳನ್ನು ಸ್ಥಾಪಿಸಿದ್ದೇವೆ. ಇನ್ನುಳಿದ ಶೇ.20ರಷ್ಟು ಎಸ್‌ಟಿಪಿಗಳು 2020ರ ವೇಳೆಗೆ ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.
ಬೆಂಗಳೂರು ಜಲಮಂಡಳಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿಬ್ಬಂದಿಗೆ ಆರೋಗ್ಯ ಸೇವೆ ಒದಗಿಸಲು ಸ್ಮಾರ್ಟ್‌ಕಾರ್ಡ್ ನೀಡಿರುವುದು ಉತ್ತಮ ಕೆಲಸ. 1990ರಲ್ಲಿ ನಾನು ಈ ಇಲಾಖೆಯ ಸಚಿವನಾಗಿದ್ದೆ. ಆಗಿನಿಂದಲೂ ಬೆಂಗಳೂರು ಜಲಮಂಡಳಿಯ ಜತೆ ನನಗೆ ನಿಕಟ ಸಂಬಂಧವಿದೆ ಎಂದು ಜಾರ್ಜ್ ತಿಳಿಸಿದರು. ಬೆಂಗಳೂರು ಈ ಹಿಂದೆ ಕೆರೆಗಳ ನಗರವಾಗಿತ್ತು. ಜನಸಂಖ್ಯೆ ಹೆಚ್ಚಳವಾಗುತ್ತಿರುವಂತೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ತರುವ ಪ್ರಯತ್ನ ನಡೆಯಿತು. ಆನಂತರ, ದೇವರಾಜ ಅರಸು ಕಾಲದಲ್ಲಿ ಕಾವೇರಿ ನದಿ ನೀರನ್ನು ಬೆಂಗಳೂರಿಗೆ ತರಲಾಯಿತು. ಈಗ ನಾವು ಕಾವೇರಿ ಐದನೆ ಹಂತಕ್ಕೆ ತಲುಪಿದ್ದೇವೆ ಎಂದು ಅವರು ಹೇಳಿದರು.
ಎತ್ತರದ ಪ್ರದೇಶದಲ್ಲಿರುವ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡುವುದು ಸವಾಲಿನ ಕೆಲಸ. ಆದರೂ, ಬೆಂಗಳೂರು ಜಲಮಂಡಳಿಯ ಸಿಬ್ಬಂದಿಗಳು ಅತ್ಯುತ್ತಮ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಉತ್ತಮ ಕೆಲಸದೊಂದಿಗೆ ಕೆಲ ಸಣ್ಣ ತಪ್ಪುಗಳು ನಮ್ಮ ಸಿಬ್ಬಂದಿಯೊಂದಿಗೆ ಆಗುತ್ತಿರುವುದನ್ನು ಕಡೆಗಣಿಸುವಂತಿಲ್ಲ ಎಂದು ಅವರು ಹೇಳಿದರು.
ಅಭಿವೃದ್ಧಿ ಹೊಂದಿದ ತಂತ್ರಜ್ಞಾನ ಲಭ್ಯವಿದ್ದರೂ ಸೋರಿಕೆಯನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದಿದೆ. ಹಾಲಿಗೆ ನಿಂಬೆ ಹುಳಿ ಹಿಂಡಿದರೆ ಏನಾಗುತ್ತದೋ ಅದೇ ರೀತಿ ಉತ್ತಮ ಅಧಿಕಾರಿಗಳ ನಡುವೆ ಕೆಲವರು ಮಾಡುವ ತಪ್ಪುಗಳಿಂದಾಗಿ ಎಲ್ಲರಿಗೂ ಕೆಟ್ಟ ಹೆಸರು ಬರುತ್ತದೆ ಎಂದು ಜಾರ್ಜ್ ತಿಳಿಸಿದರು.
ಬಿಬಿಎಂಪಿಯವರು ರಸ್ತೆ ಸರಿಪಡಿಸಿದ ಬಳಿಕ ಜಲಮಂಡಳಿಯವರು ರಸ್ತೆ ಅಗೆದು ಪೈಪ್‌ಲೈನ್ ಕಾಮಗಾರಿ ಆರಂಭಿಸುತ್ತಾರೆ. ರಸ್ತೆಯನ್ನು ಅಗೆದ ನಂತರ ಅದನ್ನು ದುರಸ್ಥಿ ಮಾಡುವ ಜವಾಬ್ದಾರಿಯೂ ನಮ್ಮದೆ ಅನ್ನೋದು ಮರೆಯಬಾರದು. ಈ ನಗರ ನಮ್ಮದು, ನಮ್ಮ ಸೇವೆಯಿಂದ ಜನರ ಪ್ರೀತಿಯನ್ನು ಸಂಪಾದಿಸಬೇಕು ಎಂದು ಅವರು ಸಲಹೆ ನೀಡಿದರು.
ಬಡವರ ಮನೆಗೆ ಸಮರ್ಪಕವಾಗಿ ನೀರು ಸರಬರಾಜು ಮಾಡದಿದ್ದರೆ ಅವರು ಅನುಭವಿಸುವ ಸಂಕಷ್ಟಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಜನಸಾಮಾನ್ಯರಿಗೆ ತೊಂದರೆ ನೀಡದೆ, ಅವರ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. ಇರುವ ನೀರನ್ನು ಉಳಿಸಿ, ಸಮರ್ಪಕವಾಗಿ ಹಂಚಿಕೆ ಮಾಡಿದರೆ, ಹೆಚ್ಚಿನ ಜನರಿಗೆ ನೀರು ಕೊಡಲು ಸಾಧ್ಯವಾಗುತ್ತದೆ ಎಂದು ಜಾರ್ಜ್ ಅಭಿಪ್ರಾಯಪಟ್ಟರು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಅಭಿಯಂತರರ ಸಂಘದ ಅಧ್ಯಕ್ಷ ರಾಜಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







